ನೆಲದ ಮಾತು

ಹೊತ್ತವಳ ನಿಟ್ಟುಸಿರು…

ಏಸು ಕ್ರಿಸ್ತ ಮತ್ತು ಭಾರತ…

Posted by Chakravarty on May 16, 2008

ಶಿಲುಬೆಗೇರಿಸಲಾಗಿದ್ದ ಏಸುಕ್ರಿಸ್ತರು ಮೃತರಾಗಲಿಲ್ಲ. ತಮ್ಮ ಅನುಯಾಯಿಗಳ ಸಹಾಯದಿಂದ ಬದುಕುಳಿದ ಅವರು ಗ್ರೇಟ್ ಬ್ರಿಟನ್ನಿನ ಕಡೆ ಹೊರಟರು. ಅಲ್ಲಿಂದ ಮೆಡಿಟರೇನಿಯನ್ ಪ್ರಾಂತ್ಯಕ್ಕೆ, ಅಲ್ಲಿಂದ ತಮ್ಮ ಗುರಿಯಾಗಿದ್ದ ಭಾರತಕ್ಕೆ!

ಮುಂದಿನ ಓದಿಗೆ ಇಲ್ಲಿ ಕ್ಲಿಕ್ ಮಾಡಿ

ಅಂದ ಹಾಗೆ, ಡಾವಿಂಚಿ ಕೋಡ್ ನೋಡಿರುವಿರಾ? ಸುಮ್ಮನೆ ಕೇಳಿದೆ.

- ವಂದೇ,

ಚಕ್ರವರ್ತಿ, ಸೂಲಿಬೆಲೆ

Posted in ದಿಲ್ ಹೈ ಹಿಂದೂಸ್ಥಾನಿ | Tagged: , , | No Comments »

ಈ ತಿಂಗಳ ಕಾರ್ಯಕ್ರಮ

Posted by Chakravarty on May 13, 2008

ನಮಸ್ತೇ.

ಚಕ್ರವರ್ತಿ ಅವರ ಬ್ಲಾಗಿಗೆ ಬರುವ ಕಮೆಂಟುಗಳಲ್ಲಿ ಬಹುಪಾಲು ಅವರ ಕಾರ್ಯಕ್ರಮಗಳ ಕುರಿತದ್ದಾಗಿದೆ. ಸಾಕಷ್ಟು ಜನ ಆ ಬಗ್ಗೆ ಪಟ್ಟಿ ನೀಡುವಂತೆ ಕೇಳಿದ್ದಾರೆ. ಇಂದಿನಿಂದ ನಿಯಮಿತವಾಗಿ ಅವರ ಬರಹಗಳನ್ನು ಪೋಸ್ಟ್ ಮಾಡಬೇಕೆಂಬ ಯೋಜನೆಯಿದೆ. ಜೊತೆಗೆ ಅವರ ಕಾರ್ಯಕ್ರಮ ಪಟ್ಟಿಯನ್ನೂ… ಆದರೆ ನಿಮ್ಮ ತಕರಾರು ತರ್ಕಗಳಿಗೆ ಮಾತ್ರ ಚಕ್ರವರ್ತಿಯೇ ಉತ್ತರ ನೀಡುವರು. ಸಹಕರಿಸಬೇಕಾಗಿ ವಿನಂತಿ.

ಚಕ್ರವರ್ತಿ ಸೂಲಿಬೆಲೆ ಅವರ ಮೇ ತಿಂಗಳ ಕಾರ್ಯಕ್ರಮಗಳು

ದಿನಾಂಕ: 14, ರಾಣಿ ಅಮ್ಮಣ್ಣಿ ಕಾಲೇಜ್. ಸಮಯ: ಮಧ್ಯಾಹ್ನ 4:00 ಗಂಟೆಯಿಂದ.

ದಿನಾಂಕ: 20, ಸುಳ್ಯ. ವಿಷಯ: ಸ್ವಾತಂತ್ರ್ಯ ವೀರ ಸಾವರ್ಕರ್.

Posted in Uncategorized | No Comments »

ಕ್ರಾಂತಿಯೋಗಿ ಬಾಬಾ ರಾಮದೇವ್

Posted by Chakravarty on May 8, 2008

ಅದು ಕ್ರಾಂತಿಯ ಹೊಸ ರೂಪ. ಸಹಸ್ರ ಸಹಸ್ರ ಸಂಖ್ಯೆಯ ಜನರನ್ನು ಒಂದೇ ದಿಕ್ಕಿನೆಡೆಗೆ ಮುನ್ನಡೆಸಿ, ಜಾಗೃತಗೊಳಿಸುವ ಕ್ರಾಂತಿ ಅದು. ಬಾಬಾ ರಾಮ್ ದೇವ್, ಆ ಕ್ರಾಂತಿಯ ಹೆಸರು. ಬಾಬಾ ರಾಮ್ ದೇವ್, ಸವಾಲುಗಳನ್ನು ಕೆಚ್ಚೆದೆಯಿಂದ ಸ್ವೀಕರಿಸುವ ಸಂಕೇತ. ಬಾಬಾ ರಾಮ್ ದೇವ್, ತಾನು ನಂಬಿದ ಸತ್ಯವನ್ನು ದೃಢವಾಗಿ ಪ್ರತಿಪಾದಿಸಬಲ್ಲ ಶ್ರದ್ಧಾ ಮೂರ್ತಿ.  ದೇಶದ ಯಾವ ಭಾಗಕ್ಕೆ ನದೆದರೂ ಇಂದು ಬೆಳಗಿನ ವೇಳೆ ‘ಆಸ್ಥಾ’ ಚಾನೆಲ್ ನಲ್ಲಿ ಬಾಬಾ ರಾಮದೇವರನ್ನು ನೋಡುತ್ತ, ಅವರ ಮಾತು ಕೇಳುತ್ತ, ಯೋಗ ಮಾಡುವವರ ಸಂಖ್ಯೆ ಲೆಕ್ಕವಿಲ್ಲದಷ್ಟು!

Baba ji

ಇಂದು ಬಾಬಾ ರಾಮದೇವ್ ಎಂದು ಕರೆಸಿಕೊಳ್ಳುತ್ತಿರುವ ರಾಮಕೃಷ್ಣ ಯಾದವರು ಜನಿಸಿದ್ದು ಹರ್ಯಾಣದ ಮಹೇಂದ್ರ ಗಢ್ ಜಿಲ್ಲೆಯ ಅಲೀಪುರದಲ್ಲಿ. ಹಾಗೆ ನೋಡಿದರೆ, ಅಚ್ಚ ಕರೀಕೂದಲಿನ, ಬೆಳ್ಳಗೆ ಹೊಳೆಯುವ ಗಟ್ಟಿ ಹಲ್ಲಿನ, ಶಕ್ತಿ ಸಂಪನ್ನ ದೇಹ ಸೌಷ್ಟವದ ರಾಮದೇವರಿಗೆ ಹೆಚ್ಚುಕಡಿಮೆ ನಲವತ್ತೈದು ವರ್ಷ! ಹುಟ್ಟಿದ ಎರಡೂವರೆ ತಿಂಗಳಿಗೇ ಪಾರ್ಶ್ವ ವಾಯುವಿಗೆ ತುತ್ತಾಗಿ ಅವರ ದೇಹದ ಅರ್ಧ ಭಾಗ ಜರ್ಝರಿತವಾಗಿತ್ತು. ದೈವ ಕೃಪೆಯಿಂದ ಅಂದು ಸಾವಿನಿಂದ ಪಾರಾದರೂ ಮುಂದೆ ಮತ್ತೆ ಏಳು ಬಾರಿ ಸಾವಿನ ಮನೆ ಹೊಕ್ಕು ಮರಳಿಬಂದರು. ಹೀಗಾಗಿ ಲೌಕಿಕ ಓದಿಗಿಂತ ಅಂತರ್ಮುಖಿಯಾಗುವ ಚಿಂತನೆ ಅವರಿಗೆ ಬಹುಬೇ ಗ ಒಗ್ಗಿಕೊಂಡಿತು. ಎಂಟನೇ ತರಗತಿಯ ವರೆಗೆ ಅಧ್ಯಯನ ನಡೆಸಿದ ರಾಮಕೃಷ್ಣ ಯಾದವ್, ಆನಂತರ ಸೇರಿದ್ದು ಗುರುಕುಲಕ್ಕೆ. ಅಲ್ಲಿ ಸಂಸ್ಕೃತ ಮತ್ತು ಯೋಗದ ಅಭ್ಯಾಸ ನಡೆಸಿದರು. ಆನಂತರ ಸಂನ್ಯಾಸ ಸ್ವೀಕರಿಸಿ, ರಾಮದೇವ್ ಬಾಬಾ ಆದರು. ಅಲ್ಲಿಂದ ಜಿಂದ್ ಜಿಲ್ಲೆಯತ್ತ ಪ್ರಯಾಣ ಬೆಳೆಸಿ, ಹರ್ಯಾಣದ ಕಾಲ್ವಾ ಗುರುಕುಲದಲ್ಲಿ ಹಳ್ಳಿಯ ಜನರಿಗೆ ಯೋಗ ತರಬೇತಿ ಶುರುಮಾಡಿದರು.
ಅಲ್ಲಿಂದಾಚೆಗೆ ಸತತ ಪರಿಶ್ರಮ ಮತ್ತು ಅಧ್ಯಯನಗಳಿಂದ ಯೋಗ ಕ್ಷೇತ್ರದಲ್ಲಿ ವಿಶೇಷ ಹಿಡಿತ ಸಾಧಿಸಿದ ಬಾಬಾ ಸಾಗಿದ ದಿಕ್ಕು ಅಭೂತಪೂರ್ವ.
೧೯೯೫ರಲ್ಲಿ ಅವರು ಆಚಾರ್ಯ ಕರ್ಮವೀರ ಮತ್ತು ಆಚಾರ್ಯ ಬಾಲಕೃಷ್ಣರೊಂದಿಗೆ ಸೇರಿ ಕೃಷ್ಣ ಗಢ್, ಮಹೇಂದ್ರ ಗಢ್, ಮತ್ತು ಘಶೇರಾಗಳಲ್ಲಿ ಗುರುಕುಲಗಳನ್ನು ಸ್ಥಾಪಿಸಿದರು. ಆಗ ಅವರಿಗೆ ಬರಿಯ ಮೂವತ್ತು ವರ್ಷ!
ಈ ಗುರುಕುಲವೂ ಸೇರಿದಂತೆ ಯೋಗ ಪ್ರಚಾರವನ್ನು ಮತ್ತಷ್ಟು ವ್ಯಾಪಕಗೊಳಿಸುವ ಚಿಂತನೆಯೊಂದಿಗೆ ರಾಮದೇವರು ‘ದಿವ್ಯ ಯೋಗ ಮಂದಿರ ಟ್ರಸ್ಟ್’ ಸ್ಥಾಪಿಸಿ, ಅದರ ಅಧ್ಯಕ್ಷರೂ ಆದರು. ಆಗಲೇ ಅವರ ಯೋಗ ಶಿಬಿರಗಳು ವಿಶ್ವದ್ಯಂತ ನಡೆಯಲು ಶುರುವಾಗಿದ್ದು. ಆ ಶಿಬಿರಗಳಲ್ಲಿ ಸಾರ್ವಜನಿಕವಾಗಿ ಯೋಗ ತರಬೇತಿ ನೀಡುತ್ತಿದ್ದ ಬಾಬಾ, ಇತರ ಚಿಕಿತ್ಸೆಗಳಿಂದ ಗುಣಪಡಿಸಲಾಗದ ಹಲವಾರು ರೋಗಗಳನ್ನು ಯೋಗದಿಂದ ಗುಣಪಡಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸುತ್ತ, ಅದನ್ನು ಎಲ್ಲೆಡೆ ಪ್ರಚುರಪಡಿಸಲಾರಂಭಿಸಿದರು. ಅವರ ಯೋಗ ಶಿಬಿರಕ್ಕೆ ಬರುತ್ತಿದ್ದವರ ಸಂಖ್ಯೆ ನೂರರಿಂದ ಸಾವಿರಕ್ಕೇರಿತು. ಈಗಂತೂ ಪ್ರತಿದಿನ ಸುಮಾರು ಇಪ್ಪತ್ತು ಸಾವಿರದಷ್ಟು ಜನ ಶಿಬಿರಗಳಲ್ಲಿ ಭಗವಹಿಸಿ ಬಾಬಾರೊಂದಿಗೇ ಯೋಗ ಸಾಧನೆ ಮಾಡುತ್ತಿರುವುದೊಂದು ವೈಶಿಷ್ಟ್ಯ.
ಇದರೊಂದಿಗೇ ಬಾಬಾ ರಾಮದೇವ್ ರಾಷ್ಟ್ರಪತಿ ಭವನದಲ್ಲಿ ಯೋಗ ಶಿಬಿರ ನಡೆಸಿ ಅನೇಕರ ಹುಬ್ಬು ಮೇಲೇರುವಂತೆ ಮಾಡಿದರು. ಲಂಡನ್ನಿನ ಹೌಸ್ ಆಫ್ ಕಾಮನ್ಸ್(ಅಲ್ಲಿನ ಸಂಸತ್ತು)ನಲ್ಲಿ ಯೋಗ ಶಿಬಿರ ನಡೆಸಿದ್ದಂತೂ ಜಾಗತಿಕ ಮಟ್ಟದಲ್ಲಿ ಅವರಿಗೆ ಸಿಕ್ಕ ಬಹುದೊಡ್ಡ ಮನ್ನಣೆ ಎನ್ನಬಹುದು.
ಯೋಗ ಅನ್ನುವುದು ಸಣ್ಣಸಣ್ಣ ಕೇಂದ್ರಗಳಿಗೆ ಸೀಮಿತವಾಗಿದ್ದ ಕಾಲಕ್ಕೆ ಅದರ ಹಂದರವನ್ನು ವಿಶಾಲಗೊಳಿಸಿ, ಪ್ರತಿಯೊಬ್ಬರೂ ಯೋಗ- ಪ್ರಾಣಾಯಾಮದ ನಿತ್ಯ ಅಭ್ಯಾಸದಲ್ಲಿ ತೊಡಗುವಂತೆ ಪ್ರೇರೇಪಿಸಿದ ಕೀರ್ತಿ ಬಾಬಾ ರಾಮದೇವರಿಗೇ ಸಲ್ಲಬೇಕು. ಆಸ್ಥಾ ವಾಹಿನಿ ಅವರ ಯೋಗ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಆರಂಭಿಸಿದಮೇಲಂತೂ ಶಿಬಿರಗಳಲ್ಲಿ ಪಾಲ್ಗೊಳ್ಳುವವರಷ್ಟೆ ಅಲ್ಲದೆ, ಟೀವಿ ನೋಡುತ್ತ, ಅವರನ್ನು ಅನುಸರಿಸುವವರ ಸಂಖ್ಯೆಯೂ ಬೆಳೆಯುತ್ತ ಸಾಗಿತು. ಈಗಂತೂ ಆಸ್ಥಾ ವಾಹಿನಿಯು ಆಫ್ರಿಕಾ, ಆಸ್ಟ್ರೇಲಿಯಾ, ಏಶಿಯಾದ ಬಹುತೇಕ ಎಲ್ಲ ರಾಷ್ಟ್ರಗಳು, ಯುರೋಪು ಮತ್ತು ಅಮೇರಿಕಾ- ಈ ಎಲ್ಲ ಕಡೆಗಳಲ್ಲೂ ರಾಮದೇವರ ಯೋಗ ಕಾರ್ಯಕ್ರಮಗಳನ್ನು ಬಿತ್ತರಗೊಳಿಸುತ್ತಿದೆ. ಮುಂಜಾನೆ ಐದರಿಂದ ಏಳೂವರೆಯವರೆಗೆ ಅವರ ಯೋಗ ಪಾಠದ ನೇರ ಪ್ರಸಾರವಿರುತ್ತದೆ. ಅದಕ್ಕಿರುವ ಜನಮನ್ನಣೆ ಕುರಿತಂತೆ ಆಸ್ಥಾ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಜೊತೆಗೆ, ಈ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಸುಮಾರು ಎರಡು ಕೋಟಿ ವೀಕ್ಷಕರಿದ್ದಾರೆ ಎನ್ನುವ ಅಂಕಿಅಂಶವನ್ನೂ ಬಿಚ್ಚಿಡುತ್ತದೆ.
ನೀವು ನಂಬಲಾರಿರಿ. ಟಿವಿಯಲ್ಲಿ ಕಾರ್ಯಕ್ರಮ ನೋಡುತ್ತ, ರಾಮದೇವರ ಯೋಗ ಪಾಠಕ್ಕೆ ಶಿಷ್ಯರಾದವರು ತಾವು ರಕ್ತದೊತ್ತಡ, ಬೊಜ್ಜು, ಸಕ್ಕರೆ ಖಾಯಿಲೆ, ಹೆಪಟೈಟಿಸ್ ಇತ್ಯಾದಿ ರೋಗಗಳಿಂದ ಮುಕ್ತರಾಗಿರುವ ಬಗ್ಗೆ ದೃಢ ಧ್ವನಿಯಲ್ಲಿ ಹೇಳಿಕೊಳ್ಳುತ್ತಾರೆ. ಅಂದಮೇಲೆ, ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಯೆಂಬುದನ್ನು ಒಪ್ಪಲೇಬೇಕು ತಾನೆ?
ಇತರರ ಯೋಗ ತರಗತಿಗಳಿಗೂ ರಾಮದೇವರ ಯೋಗ ತರಗತಿಗೂ ವ್ಯತ್ಯಾಸವೇನು? ಅವರೇಕೆ ಇಷ್ಟೊಂದು ಜನಪ್ರಿಯರು? ಈ ಪ್ರಶ್ನೆಗಳು ಸಹಜ. ರಾಮದೇವ್ ಬಾಬಾ, ಇತರರಂತೆ ಆಸನಗಳಿಗೇ ಹೆಚ್ಚು ಒತ್ತು ಕೊಟ್ಟು ಕೂರುವವರಲ್ಲ. ಅವರ ಯೋಗವೆಂದರೆ, ಬಹುತೇಕ ಪ್ರಾಣಾಯಾಮವೇ. ಉಸಿರಿನ ಮೇಲೆ ಹಿಡಿತ ಸಾಧಿಸುವುದರಿಂದ ದೇಹದ ಮೇಲೆ ಸುಲಭವಾಗಿ ಹಿಡಿತ ಸಾಧಿಸಬಹುದೆಂಬುದನ್ನು ಅವರು ಅನೇಕ ನಿದರ್ಶನಗಳ ಮೂಲಕ ಸಿದ್ಧಪಡಿಸಿದ್ದಾರೆ.  ಹೀಗಾಗಿಯೇ “ಭಾರತದಲ್ಲಿ ಯೋಗದ ಪುನರುತ್ಥಾನಕ್ಕೆ ಕಾರಣರಾದ ಒಬ್ಬ ವ್ಯಕ್ತಿಯನ್ನು ಹೆಸರಿಸಬೆಕೆಂದರೆ, ಅದು ನಿಸ್ಸಂಶಯವಾಗಿ ಬಾಬಾ ರಾಮದೇವರೇ. ಯೋಗದಿಂದ ಮಾರಕ ರೋಗಗಳನ್ನು ಗುಣಪಡಿಸಬಹುದೆಂದು ಅವರು ಮೇಲಿಂದಮೇಲೆ ನಿರೂಪಿಸುತ್ತ ಬಂದಿದ್ದಾರೆ. ಸ್ವಾಮಿ ರಾಮದೇವರು ಯೋಗವನ್ನು ಪ್ರಚುರಪಡಿಸುತ್ತಿರುವ ರೀತಿ ಹೇಗಿದೆಯೆಂದರೆ, ಆದಷ್ಟು ಬೇಗ ಪ್ರತಿಯೊಬ್ಬರಿಗೂ ಅದರ ಅರಿವು ಮೂಡಿ ಯೋಗವನ್ನು ಅಪ್ಪಿಕೊಳ್ಳುವ ದಿನ ದೂರವಿಲ್ಲ” ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಉದ್ಗಾರವೆತ್ತಿದ್ದು!
ಬಾಬಾ ರಾಮದೇವರದೊಂದು ಭವ್ಯ ಕನಸಿದೆ. ಅದು, ಪತಂಜಲಿ ಯೋಗ ಕೇಂದ್ರದ್ದು. ಸುಮಾರು ನೂರುಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಗ ಪೀಠ ಹರಿದ್ವಾರದಿಂದ ೨೦ ಕಿ.ಮೀ ದೂರದಲ್ಲಿ ಬಹದ್ರಾಬಾದಿನಲ್ಲಿ ನಿರ್ಮಾಣವಾಗಲಿದೆ. ಯೋಗ, ಆಯುರ್ವೇದಗಳನ್ನು ತುತ್ತತುದಿಗೊಯ್ದು ನಿಲ್ಲಿಸಿ, ಇಡಿ ಜಗತ್ತಿಗೆ ಅದರ್ ಬೆಳಕು ಹರಿಯುವಂತೆ ಮಾಡುವ ಇರಾದೆ ಬಾಬಾರದ್ದು.
೨೦೦೬ರ ಆಗಸ್ಟ್ ೬ರಂದು ಈ ಯೋಜನೆಗೆ ಚಾಲನೆ ದೊರಕಿದೆ. ಬರಲಿರುವ ೨೦೦೯ರ ವೇಳೆಗೆ ಜಗತ್ತಿನ ಕಣ್ ಕುಕ್ಕುವ ಈ ಅದ್ಭುತ ಯೋಜನೆಯು ಲೋಕಾರ್ಪಣಗೊಳ್ಳಲಿದೆ. ಈ ಕೇಂಡ್ರದಲ್ಲಿ ಸಾವಿರ ರೋಗಿಗಳನ್ನು ಒಮ್ಮೆಗೇ ಗುಣಪಡಿಸಬಹುದಲ್ಲದೆ, ಐದು ಸಾವಿರ ಮಂದಿ ಒಟ್ಟಿಗೆ ಯೋಗ ನಿರತರಾಗಬಹುದಾದಷ್ಟು ಸ್ಥಳವಕಾಸವೂ ಇರಲಿದೆ. ದಿನವೊಂದಕ್ಕೆ ಒಟ್ಟಾರೆಯಾಗಿ ಐದು ಸಾವಿರ ರೋಗಿಗಳ ತಪಾಸಣೆ ಮಾಡಬಲ್ಲ ಜಗತ್ತಿನ ಅತಿ ದೊಡ್ಡ ಚಿಕಿತ್ಸಾಲಯವೂ ಇದಾಗಲಿದೆ.
ಸ್ವಾಮಿ ರಾಮದೇವರ ಈ ಯೋಗ ಯಾತ್ರೆಯನ್ನು ಮೆಚ್ಚಿಯೇ ಒರಿಸ್ಸಾದ ಕಳಿಂಗ ಇನ್ಸ್ಟಿಟ್ಯೂಟ್  ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು. ಈ ಕರ್ಯಕ್ರಮದಲ್ಲಿ ಭಾಗವಹಿಸಿದ್ದ ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರ ವಿಜ್ಞಾನಿ ರಿಚರ್ಡ್ ಅರ್ನೆಸ್ಟ್, ಯೋಗ ಪದ್ಧತಿಯನ್ನೂ ಬಾಬಾರನ್ನೂ ಭಾವ ಪೂರ್ಣವಾಗಿ ಕೊಂಡಾಡಿದ್ದರು.
ಬಾಬಾ ರಾಮದೇವರ ಸಾಧನೆಯ ಹಾದಿ ಹೂವಿನಿಂದಲೇ ಕೂಡಿದ್ದು ಎಂದೇನೂ ಭಾವಿಸಬೇಡಿ. ಯೋಗದ ವ್ಯಾಪಕ ಪ್ರಚಾರದಿಂದ ಹಿಂದುತ್ವದ - ಭಾರತೀಯತೆಯ ಪ್ರಚಾರವಾಗುತ್ತದೆಂದು ಕರುಬಿದ ಕಮ್ಯುನಿಸ್ಟ್ ಪಕ್ಷ ಅವರ ಮೇಲೆ ತಮ್ಮೆಲ್ಲ ಕುಯುಕ್ತಿಗಳನ್ನೂ ಪ್ರಯೋಗಿಸಿ ಗೋಳುಹೊಯ್ದುಕೊಂಡಿತು. ೨೦೦೫ರಲ್ಲಿ ೧೧೩ ಮಂದಿ ದಿವ್ಯ ಯೋಗ ಮಂದಿರದ ಉದ್ಯೋಗಿಗಳು ಪಕ್ಷದೊಂದಿಗೆ ಕೈ ಜೋಡಿಸಿ ಬಾಬಾ ವಿರುದ್ಧ ಸಮರ ಸಾರಿದರು. ಧೃತಿಗೆಡದ ರಾಮದೇವರು, ಜಿಲ್ಲಾಡಳಿತ, ಉದ್ಯೋಗಿಗಳು, ಮತ್ತು ಟ್ರಸ್ಟ್ ನ ಆಡಳಿತ ಮಂಡಳಿಯೊಂದಿಗೆ ಸೇರಿ ಒಪ್ಪಂದ ಮಾಡಿಕೊಂಡರು. ಆನಂತರ, ಉದ್ಯೋಗಿಗಳ ನಡುವೆಯಿದ್ದುಕೊಂಡು ಗಲಭೆ ಹುಟ್ಟುಹಾಕುತ್ತಿದ್ದವರನ್ನು ಗೂಂಡಾಗಿರಿಯ ಆರೋಪ ಹೊರೆಸಿ ಕೆಲಸದಿಂದು ಕಿತ್ತುಹಾಕಿದರು. ಬಾಲ ಸುಟ್ಟಂತಾದ ಪಕ್ಷ ಮತ್ತು ಅದರ ಬೆಂಬಲಿಗರು ಟ್ರೇಡ್ ಯೂನಿಯನ್ ಮೂಲಕ ಕೋರ್ಟ್ ಮೆಟ್ಟಿಲೇರಿತು. ಬಾಬಾ ಜಗ್ಗಲಿಲ್ಲ.
ಕಮ್ಯುನಿಸ್ಟ್ ಪಕ್ಷದ ನಾಯಕಿ ಬೃಂದಾ ಕಾರಟ್ ದೆಹಲಿಯಲ್ಲಿ ಪತ್ರಕರ್ತರ ಸಭೆ ಕರೆದು, ಬಾಬಾ ರಾಮದೇವರ ಕಾರ್ಖಾನೆಯಲ್ಲಿ ತಯಾರಿಸಲಾಗುವ ಕೆಲವು ಔಷಧಗಳಿಗೆ ಪ್ರಾಣಿಗಳ ಮತ್ತು ಮಾನವರ ಮೂಳೆ ಪುಡಿಯನ್ನು ಬೆರೆಸಲಾಗುತ್ತಿದೆ ಎಂದು ಆರೋಪಿಸಿದರು. ಅಷ್ಟಕ್ಕೆ ಸುಮ್ಮನಾಗದೆ, ಮುಂದಿನ ಕೆಲವು ದಿನಗಳಲ್ಲಿ, ರಾಮದೇವರ ಸಂಸ್ಥೆಯಿಂದ ತಯಾರಾದ ಔಷಧಗಳನ್ನು ಔಷಧಿ ಅಂಗಡಿಗಳಿಂದ ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆಯೆಂದೂ ಅವುಗಳಲ್ಲಿ ಮೂಳೆಪುಡಿ ಬೆರೆತಿರುವುದು ಸಾಬೀತಾಗಿದೆಯೆಂದೂ ಮತ್ತೊಮ್ಮೆ ಕಾರಿಕೊಂಡರು.
ಬಾಬಾ ಸುಮ್ಮನೆ ಕೂರಲಿಲ್ಲ. ತಾವೂ ಅದೇ ಔಷಧಾಲಯಗಳಿಂದ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು. ಅಲ್ಲಿ ಅವು ಶುದ್ಧ ಆಯುರ್ವೇದೀಯ ಮತ್ತು ಸಸ್ಯಾಹಾರಿ ಔಷಧಗಳು ಎಂದು ದೃಢವಾಯಿತು. ಬಾಬಾ, ಸುಳ್ಳು ಆರೋಪ ಮಾಡಿದ್ದನ್ನು ಪ್ರಶ್ನಿಸಿ ಬ್ರುಂದಾರನ್ನು ತರಾಟೆಗೆ ತೆಗೆದುಕೊಂಡರು. ಇದು ಯಾವ ಮಟ್ಟಕ್ಕೇರಿತೆಂದರೆ, ಮೊದಲ ಬಾರಿಗೆ ಅವರ ವಿರುದ್ಧ ವ್ಯಾಪಕ ಜನಾಭಿಪ್ರಾಯ ರೂಪಿಸುವುದು ಸಾಧ್ಯವಾಯಿತು. ಆಕೆಯಂತೂ ಇನ್ನೆಂದಿಗೂ ತಾನು ಇಂತಹ ಸಂಗತಿಗಳಲ್ಲಿ ಸಿಕ್ಕಿಬೀಳಲಾರೆ ಎಂದು ಸರ್ವಜನಿಕವಾಗಿ ಹೇಳಿಕೆ ಕೊಡಬೇಕಾಯ್ತು!
ಆದರೇನು? ಬಾಬಾ ರಾಮದೇವರ ಮೇಲೆ ಈ ರೀತಿಯ ರಾಜಕೀಯ ಪ್ರೇರಿತ, ದುರುದ್ದೇಶ ಪೀಡಿತ ಆಕ್ರಮಣಗಳಾದಂತೆಲ್ಲ ಅವರ ಬಳಿ ಸಾರುವ ಜನರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಯೋಗ ಪದ್ಧತಿಯನ್ನು ಅಳವಡಿಸಿಕೊಂಡು, ಶಾಖಾಹಾರ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಋಜು ಮಾರ್ಗಗಳನ್ನು ಅನುಸರಿಸುವವರು ಹೆಚ್ಚುತ್ತಲೇ ಇದ್ದಾರೆ.
ಇರಲಿ. ಯೋಗ, ಪ್ರಾಣಯಾಮ, ಮನೆ ಮದ್ದು (ಹೋಮ್ ರೆಮಿಡಿ), ಯೋಗ ಮತ್ತು ಆರೋಗ್ಯ ವಿಜ್ಞಾನ ಎಂಬ ನಾಲ್ಕು ಪುಸ್ತಕಗಳನ್ನು ಬರೆದಿರುವ ರಾಮದೇವ್ ಬಾಬಾ, ತಮ್ಮ ಟ್ರಸ್ಟ್ ವತಿಯಿಂದ ಮಾಸಿಕ ಪತ್ರಿಕೆಯನ್ನೂ ಹೊರತರುತ್ತಿದ್ದಾರೆ. ಯೋಗ ಪ್ರದರ್ಶನ- ಪಾಠಗಳ ೪೪ ಸಿ.ಡಿ.ಗಳನ್ನೂ ಮಾರುಕಟ್ಟೆಯಲ್ಲಿರಿಸಿದ್ದಾರೆ.
ತಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸದಿಂದಲೇ ‘ರೋಗ ಮುಕ್ತ ಭಾರತ ಮತ್ತು ವಿಶ್ವ’ದ ಕನಸು ಕಾಣುತ್ತಿರುವ ಬಾಬಾ, ಯೋಗದಿಂದಲೇ ಆರ್ಯಾವರ್ತ ದೇಶ (ಭಾರತ) ಮತ್ತೆ ಜಗದ್ಗುರುವಿನ ಪಟ್ಟವೇರಲಿದೆ ಎಂದು ಅಸೀಮ ವಿಶ್ವಾಸದಿಂದ ನುಡಿಯುತ್ತಾರೆ.
ಅವರೊಂದಿಗೆ ನಾವು ಕೈ ಜೋಡಿಸಬೇಕಿದೆ, ಅಷ್ಟೇ!
 
 

Posted in ದಿಲ್ ಹೈ ಹಿಂದೂಸ್ಥಾನಿ | 2 Comments »

ಜರಾ ಯಾದ್ ಕರೋ ಕುರ್ಬಾನಿ….

Posted by Chakravarty on March 18, 2008

ಅದು ೧೯೩೧ನೆ ಇಸವಿ, ಮಾರ್ಚ್ ೨೩. ಲಾಹೋರಿನ ಸೆರೆಮನೆಯ ಮುಂದೆ ಸಾವಿರಾರು ಜನ ಸೇರಿದ್ದರು. ‘ವಂದೇ ಮಾತರಂ’ ಘೋಷಣೆ ಮುಗಿಲು ಮುಟ್ಟಿತ್ತು. ಆ ಜನ ಸಂದಣಿಯಲ್ಲಿ ಎಲ್ಲರಿಗಿಂತ ವೃದ್ಧ ತಾಯ್ತಂದೆಯರು ನಿಂತಿದ್ದರು. ಅವರ ಕಂಗಳಲ್ಲಿ ಮುಂದೇನಾಗುವುದೋ ಎಂಬ ಕಾತರತೆ. ಪಾಪಿ ಬ್ರಿಟಿಷರು ತಮ್ಮ ಮಕ್ಕಳನ್ನು ನಿರ್ದಯವಾಗಿ ಗಲ್ಲಿಗೇರಿಸುತ್ತಾರಲ್ಲ ಅನ್ನುವ ದುಗುಡ. ಆದರೂ ಕಣ್ಣಲ್ಲಿ ಹನಿ ನೀರಿಲ್ಲ! ಅಂಥ ಧೀರತನ.

ಹ್ಹ್! ಆ ಎದೆಗಾರಿಕೆ ಬ್ರಿಟಿಷರಿಗಿರಬೇಕಲ್ಲ? ಹೊರಗೆ ನೆರೆದ ಜನ ಸಂದಣಿಯನ್ನು ಕಂಡೇ ನಡುಗಿಹೋಗಿದ್ದರು. ಅವರೆಲ್ಲಿ ಸೆರೆಮನೆಯ ಗೋಡೆ ಒಡೆದು ಒಳನುಗ್ಗಿ, ಯುವ ಕ್ರಾಂತಿಕಾರಿಗಳನ್ನು ಬಿಡಿಸಿ ಕರೆದೊಯ್ಯುವರೋ ಎಂಬ ಅಂಜಿಕೆ ಅವರಿಗೆ. ಅದಕ್ಕಾಗಿಯೇ ಅವರು ನಿಗದಿತ ದಿನಕ್ಕಿಂತ ಒಂದು ದಿನ ಮೊದಲೇ ತಮ್ಮ ಅಪರಾಧಿಗಳನ್ನು ಗಲ್ಲಿಗೇರಿಸುವ ತಯಾರಿಯಲ್ಲಿದ್ದರು.

ಇಷ್ಟಕ್ಕೂ ಆ ಅಪರಾಧಿಗಳು ಮಾಡಿದ್ದ ಅಪರಾಧ ಯಾವುದು ಗೊತ್ತೇ? ದೇಶದ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದ್ದು. ಆ ದನಿ ಕಿವುಡು ಬ್ರಿಟಿಷ್ ಸತ್ತೆಗೆ ಕೇಳದಾದಾಗ ಬಾಂಬೆಸೆದು ಸದ್ದು ಮಾಡಿದ್ದರು ಅವರು!
ಅವರೇ ದೇಶದಲ್ಲಿ ಕ್ರಾಂತಿ ದೀಪ ಮತ್ತಷ್ಟು ಜ್ವಾಜಲ್ಯಮನವಾಗಿ ಬೆಳಗುವಂತೆ ಮಾಡಲು ತಮ್ಮ ರಕ್ತವನ್ನೇ ಬಸಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್!

bb.jpg

ಹಾಗೆ ಈ ಮೂವರು ಯುವ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲು ಅವರು ಕೊಟ್ಟ ಕಾರಣ ‘ರಾಜ ದ್ರೋಹ’. ಈ ಬಿಸಿ ರಕ್ತದ ಯುವಕರು ಅನ್ಯಾಯ ದರ್ಪಗಳ ಮುದ್ದೆಯಂತಿದ್ದ ಸ್ಯಾಂಡರ್ಸ್ ನ ಹತ್ಯೆ ಮಾಡಿದ್ದರು. ಅಸಲಿಗೆ ಅವರ ಗುರಿಯಾಗಿದ್ದಿದ್ದು ಸ್ಕಾಟ್. ಈತ ಲಾಲಾಜಿಯವರ ಸಾವಿಗೆ ಕಾರಣನಾಗಿದ್ದ. ಅದರ ಸೇಡು ತೀರಿಸಿಕೊಳ್ಳಲೆಂದೇ ಈ ಕ್ರಾಂತಿಕಾರಿಗಳು ಸ್ಕಾಟ್ ಹತ್ಯೆಯ ಯೋಜನೆ ರೂಪಿಸಿದ್ದರು. ಅದರ ಬದಲಿಗೆ ಮತ್ತೊಬ್ಬ ದುರಹಂಕಾರಿಯ ಸಂಹಾರವಾಗಿತ್ತು.

ಭಗತ್ ಸಿಂಗನ ಕಥೆ ಕೊನೆಯ ಪಕ್ಷ ಆ ಸಿನೆಮಾ ನೋಡಿದ ಹಲವು ಯುವಕರಿಗಾದರೂ ಗೊತ್ತಿರುತ್ತದೆ. ಹೌದು. ನಮ್ಮ ಪಠ್ಯಗಳಲ್ಲಿ ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆ ಪಡುವಂಥ ನಮ್ಮ ಚರಿತ್ರೆಯನ್ನು ಹೇಳಿರುವುದು ಕದಿಮೆ. ಭಗತ್ ಸಿಂಗನದಾದರೂ ಕೊಂಚ ಕಂಡೀತೇನೋ, ರಾಜ ಗುರುವಿನಂಥ ಮರಾಠಾ ಕಲಿ, ಸುಖದೇವನಂತಹ ಸಮರ್ಪಣಾ ಭಾವದ ಕ್ರಾಂತಿವೀರರ ಬಗ್ಗೆ ಕೇಳುವುದೇ ಬೇಡ.

ಇರಲಿ. ಈ ಭಗತ್ ಸಿಂಗ್, ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕೆಚ್ಚು ಬೆಳೆಸಿಕೊಂಡಿದ್ದು ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ದುರಂತದಿಂದ. ನಂತರ, ಗಾಂಧೀಜಿಯವರ ಅಸಹಕಾರ ಚಳುವಳಿ ಆತನ ಹೋರಾಟಕ್ಕೊಂದು ಮಾರ್ಗ ಹಾಕಿಕೊಟ್ಟಿತು. ಆದರೆ ಚೌರಿಚೌರಾದ ಘಟನೆಗೆ ಪ್ರತಿಕ್ರಿಯೆಯಾಗಿ ಗಾಂಧೀಜಿ ಚಳುವಳಿಯನ್ನು ಹಿಂಪಡೆದರು. ಇದರಿಂದ, ಶಾಲೆ ಬಿಟ್ಟು ಚಳುವಳಿಗೆ ಧುಮುಕಿದ್ದ ಭಗತನಿಗೆ ನಿರಾಸೆಯಾಯ್ತು. ಮುಂದೆ ಲಾಹೋರಿನ ನ್ಯಾಶನಲ್ ಕಾಲೇಜಿನಲ್ಲಿ ಓದು ಮುಂದುವರೆಸಿದ.
ಕಾಲೇಜಿನ ದಿನಗಳಲ್ಲಿ ಸುಕದೇವನ ಜೊತೆಗೂಡಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬಿತ್ತುವ ಕೆಲಸ ಮಾಡುತ್ತಿದ್ದ ಭಗತ್, ಕ್ರಮೇಣ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಪಡೆದ. ಪಂಡಿತ್ ಜೀ ಎಂದೇ ಖ್ಯಾತರಾಗಿದ್ದ ಚಂದ್ರ ಶೇಖರ ಆಜಾದರ ಸಹವಾಸಕ್ಕೆ ಬಂದಮೇಲಂತೂ ಅವನ ಕ್ರಾಂತಿ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡವು. ಹಿರಿಯ ಕ್ರಾಂತಿಕಾರಿಗಳೊಡಗೂಡಿ ಕಾಕೋರಿ ಲೂಟಿಯಲ್ಲಿ ಪಾಲ್ಗೊಂಡ.

ಮುಂದೆ ಜೈಲಿನಲ್ಲಿ ಕೂಡ ಭಗತ್ ಸಿಂಗ್ ತನ್ನ ಸ್ವಾಭಿಮಾನ, ಸ್ವಾತಂತ್ರ್ಯ ಪ್ರಿಯತೆಯನ್ನು ಮೆರೆದ. ನಲವತ್ತು ದಿನಗಳ ಕಾಲ ಸಂಗಡಿಗರೊಂದಿಗೆ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ದೇಶ ಬಾಂಧವರಿಗೆ ಕ್ರಾಂತಿಕಾರಿಗಳ ಹೋರಾಟದ ಬಗ್ಗೆ ಇದ್ದ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿದ. ಆತ ಪ್ರತಿಪಾದಿಸಿದ ‘ಪೂರ್ಣ ಸ್ವರಾಜ್ಯ’ ಚಿಂತನೆಯು ಕಾಂಗ್ರೆಸ್ಸಿನ ತರುಣರನ್ನು ಸೆಳೆಯಿತು. ಆವರೆಗೂ ಡೊಮಿನಿಯನ್ ಸ್ಟೇಟಸ್ ಬಗ್ಗೆ ಮಾತಾಡುತ್ತಿದ್ದ ಕಾಂಗ್ರೆಸ್, ತಾನೂ ಪೂರ್ಣ ಸ್ವರಾಜ್ಯದ ಬಗ್ಗೆ ಘೋಷಣೆ ನೀಡಲಾರಂಭಿಸಿತು.

ಇನ್ನೂ ಮೂವತ್ತು ಮುಟ್ಟಿರದ ಮೂರು ರತ್ನಗಳು ಜಯಗೋಪಾಲ ಎನ್ನುವ ದ್ರೋಹಿಯ ಕಾರಣದಿಂದ ದೇಶಭಕ್ತಿಗೆ ಶಿಕ್ಷೆ ಅನುಭವಿಸಬೇಕಾಗಿ ಬಂದಿದ್ದು ನಮ್ಮ ಪಾಲಿನ ದುರಂತ. ಈ ಬಗೆಯ ದ್ರೋಹಿಗಳೇನು ಬಿಡಿ, ಸಿರಾಜುದ್ದೌಲನನ್ನು ನಂಬಿಸಿ ಕೇಡು ಬಗೆದ ಮೀರ್ ಜಾಫರನಿಂದ ಹಿಡಿದು, ಚಾಫೇಕರ್ ಸಹೋದರರ ನೇಣಿಗೆ ಕಾರಣನಾದ ದ್ರವಿಡನವರೆಗೂ ಇದ್ದೇ ಇದ್ದರು. ಯಾಕೆ? ಅಲೆಕ್ಸಾಂಡರನು ಭಾರತಕ್ಕೆ ಬಂದ ಕಾಲದಲ್ಲೇ ಪೌರವನಿಗೆ ದ್ರೋಹ ಬಗೆದ ಅಂಬಿಯೇ ಇರಲಿಲ್ಲವೇ? ನಮ್ಮ ಚೆನ್ನಮ್ಮ ಕೂಡ ಸೆರೆ ಸಿಕ್ಕಿದ್ದು ದ್ರೋಹಿಗಳ ಕಾರಣದಿಂದಲೇ. ಇಲ್ಲವಾದಲ್ಲಿ ನಮ್ಮ ಹೆಮ್ಮೆಯ ನಾಡಿನ ಕದನ ಕಲಿಗಳನ್ನು ಬಂದೂಕಿನ ತುದಿಯಿಂದ ಹೆದರಿಸಿ ಸೆರೆ ಹಿಡಿಯುವಷ್ಟು ತಾಖತ್ತು ಪರದೇಶೀಯರಿಗೆಲ್ಲಿಂದ ಬರಬೇಕು!?

ಇರಲಿ. ಅಂತೂ ನಮ್ಮ ಕ್ರಾಂತಿರತ್ನಗಳು ನಗುನಗುತ್ತ ಕುಣಿಕೆ ಚುಂಬಿಸಿ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಿಸುತ್ತ ಆತ್ಮಾಹುತಿಗೆ ಅಣಿಯಾದರು. ಕಟುಕನ ಕಾಯಕದ ಜೈಲರ್ ಕೂಡ ಇವರ ಕೆಚ್ಚು ಕಂಡು ಕಣ್ಣೀರ್ಗರೆದ. ಅಂತೂ ಇಂತೂ ಮಾರ್ಚ್ ೨೩ರ ಆ ದಿನ ಭಗತ್, ರಾಜ ಗುರು, ಸುಖದೇವರು ತಾಯಿ ಭಾರತಿಗಾಗಿ ತಮ್ಮ ಜೀವವನ್ನು ಧಾರೆ ಎರೆದರು. ಭಗತನಂತೂ ಆಜಾದರು ತಪ್ಪಿಸಿಕೊಳ್ಳುವ ಉಪಾಯ ಸೂಚಿಸಿದ್ದಾಗ ‘ನಾನು ಇದ್ದು ಮಾದುವುದಕ್ಕಿಂತ ಸತ್ತು ಇನ್ನೂ ಹೆಚ್ಚಿನದನ್ನು ಸಾಧಿಸಬಲ್ಲೆ’ ಎಂದು ದೃಢವಾಗಿ ನುಡಿದಿದ್ದ. ಅದರಂತೆ, ಲಕ್ಷಲಕ್ಷ ಭಾರತೀಯರು ದೇಶಕ್ಕಾಗಿ ಸಾಯುವ ಪಾಠವನ್ನು ಈ ನಗುಮೊಗದ ತರುಣರಿಂದ ಕಲಿತುಕೊಂಡರು. ಜೀವದ, ಸುರಕ್ಷತೆಯ, ಸ್ವಾರ್ಥದ ಹಂಗು ತೊರೆದು ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ಮುಂದಡಿಯಿಟ್ಟರು.
ಯುವಕರಲ್ಲಿ ಮೂಡಿದ ಈ ‘ಸಾಯುವ’ ಕೆಚ್ಚು ಮುಂದೆ ಸುಭಾಷರ ಆಜಾದ್ ಹಿಂದ್ ಫೌಜಿಗೆ  ಸಾಕಷ್ಟು ಬಲ ತಂದಿತು.

ಅಹಿಂಸಾಚಳುವಳಿಗೆ ಪೂರಕವಾಗಿ ನಡೆದ ಕ್ರಾಂತಿ ಚಳುವಳಿ, ನೇತಾಜಿಯ ಸೇನಾಬಲ ಮತ್ತು ಬ್ರಿಟಿಷರ ಕೆಳಗಿದ್ದ ಭಾರತೀಯ ಸೈನಿಕರು ನೇತಾಜಿಯವರತ್ತ ಬೆಳೆಸಿಕೊಳ್ಳತೊಡಗಿದ ಒಲವು, ಬ್ರಿಟಿಷರನ್ನು ಹೆದರಿಸಿತು. ಪಾಪ! ಅವರಿಗೆ ೧೮೫೭ರ ನೆನಪಾಗಿರಲೂ ಸಾಕು!! ಅಂತೂ ನಮಗೆ ಸ್ವಾತಂತ್ರ್ಯ ದಕ್ಕಿತು.

ಭಗತ್ ಸಿಂಗನಿಗೆ ಸ್ವಾತಂತ್ರ್ಯ ಪ್ರಾಪ್ತಿಯೊಂದೇ ಮುಖ್ಯವಾಗಿರಲಿಲ್ಲ. ಸ್ವಾತಂತ್ರ್ಯಾನಂತರದ ಭಾರತ ಹೇಗಿರಬೇಕೆನ್ನುವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಗಳಿದ್ದವು. ಆದರೆ ಅವೆಲ್ಲವೂ ಆತನೊಂದಿಗೇ ಮಣ್ಣುಗೂಡಿ ಹೋದವು.

ಅಳಿದರೇನು ದೇಹವಂದು
ಧ್ಯೇಯ ದೀಪ ಉರಿದಿದೆ
ನವ ಜನಾಂಗ ನೆಗೆದು ಬಂದು
ತೈಲವದಕೆ ಸುರಿದಿದೆ

- ಎಂದಿದೆ ಕವಿವಾಣಿ. ಆದರೆ ನಮ್ಮ ಯುವ ಪೀಳಿಗೆ ಅಂಥ ಯಾವ ಧ್ಯೇಯವನ್ನೂ ಕಾಯ್ದುಕೊಳ್ಳಲು ಮನಸ್ಸು ಮಾಡುತ್ತಿಲ್ಲ ಅನ್ನುವುದೇ ದುರಂತ.
ಈಗಲೂ ಕಾಲ ಮಿಂಚಿಲ್ಲ. ಮಾರ್ಚ್ ೨೩ರ ಶಹೀದ್ ದಿನದಂದು ನಾವೆಲ್ಲರೂ ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರಲ್ಲಿ ಅವರ ಹೋರಾಟವನ್ನು ಸಾರ್ಥಕಗೊಳಿಸುವ, ದೇಶದ ಸ್ವಾಭಿಮಾನ- ಸ್ವಾವಲಂಬಿತೆಗಳನ್ನು ಕಾಯ್ದಿಡುವ ದೀಕ್ಷೆ ತೊಡೋಣ. ಅವರ ಬಲಿದಾನವನ್ನು ಗೌರವಿಸೋಣ. ಆಗದೇ?
 

Posted in ದಿಲ್ ಹೈ ಹಿಂದೂಸ್ಥಾನಿ | 3 Comments »

ಭಾನುವಾರದ ಸುಂದರ ಸಂಜೆ…

Posted by Chakravarty on February 18, 2008

ನಿಜಕ್ಕೂ ಫೆಬ್ರವರಿ ಹದಿನೇಳರ ಭಾನುವಾರದ ಸಂಜೆ ನನಗೆ ಅವಿಸ್ಮರಣೀಯವಾದ ಭಾವ ಜಾಗೃತಿಯ ಸಾರ್ಥಕ ಸಮಯವಾಗಿತ್ತು. ಅತ್ಯಂತ ಉಲ್ಲಾಸದಾಯಕವಾಗಿತ್ತು.
ಹೀಗೆ ನನ್ನನ್ನು ಆಳವಾಗಿ ತಟ್ಟಿದ ಕಾರ್ಯಕ್ರಮದ ಹೆಸರು- “ವಂದೇ ಮಾತರಂ ಗೀತ ಸಂಧ್ಯಾ”
ಮೈತ್ರಿ ಸಂಸ್ಕೃತಿ ಪ್ರತಿಷ್ಟಾನದ ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ‘ಭಾರತ ವೈಭವ’ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು.

ವಂದೇ ಮಾತರಂ

‘ವಂದೇ ಮಾತರಂ…’ ಈ ಎರಡು ಪದಗಳು ಸಾಕು ಮಿಂಚಿನ ಸಂಚಾರಕ್ಕೆ. ಯಾವ ಎರಡು ಪದಗಳನ್ನು ಉಚ್ಚ ಕಂಠದಲ್ಲಿ ಮೊಳಗಿಸುತ್ತ ಸಾವಿರಾರು ರಾಷ್ಟ್ರ ಪ್ರೇಮಿಗಳು ಹುತಾತ್ಮರಾದರೋ, ಲಕ್ಶಾಂತರ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಪಣ ತೊಟ್ಟೂ ನಿಂತರೋ ಅಂತಹ ಪ್ರೇರ್‍ಅಕ ರಣ ಮಂತ್ರ ಅದು!

ಬಹುಶಃ ನಿಮಗೆ ‘ವಂದೇ ಮಾತರಂ’ ಹುಟ್ಟಿದ ಬಗೆ ಗೊತ್ತಿರಬಹುದು.
ಖ್ಯಾತ ಕವಿ ಶ್ರೀ ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ತಾಯಿ ಭಾರತಿಯೊಡಲಿನ ನಿಸರ್ಗ ಸೌಂದರ್ಯಕ್ಕೆ ಮಾರುಹೋದರು. ಜೊತೆಜೊತೆಗೆ ಆಕೆಗೊದಗಿದ ದುರ್ಗತಿಯನ್ನೂ, ಅದಕ್ಕೆ ಪ್ರತಿಯಾಗಿ ಧೀರಭಾರತೀಯರ ಹೋರಾಟವನ್ನೂನೆನೆಯುತ್ತ ಸಾಗಿದರು. ಅದರ ಪರಿಣಾಮ, ರಾತ್ರಿಯ ನಿದ್ರೆಯಲ್ಲೂ ಅವೆಅವೇ ಚಿತ್ರಣಗಳು. ಕನವರಿಕೆಯಲ್ಲಿ ಮೂಡಿಬಂದಿದ್ದು ‘ವಂದೇ ಮಾತರಂ’ ದಿವ್ಯಗೀತೆ!
ಬಂಕಿಮ ಚಂದ್ರರ ಸಂಬಂಧಿ ತರುಣನೊಬ್ಬ ಅವರು ಕನವರಿಸಿದ ಸಾಲುಗಳನ್ನು ಬರೆದುಕೊಂಡ. ಬಂಕಿಮ ಚಂದ್ರರು೮ ಎಚ್ಚರವಾದ ಬಳಿಕ ಅವರಿಗೆ ಅವನ್ನು ತೋರಿಸಿದ. ಸಂಭ್ರಾಂತರಾದ ಬಂಕಿಮಚಂದ್ರರು ಅದಕ್ಕೆ ಅಂತಿಮ ಸ್ಪರ್ಷ ನೀಡಿದರು. ಮುಂದೆ ಅವರ ಜನಪ್ರಿಯ ಕೃತಿ ‘ಆನಂದಮಠ’ದಲ್ಲಿ ಈ ಗೀತೆ ರಣ ಮಂತ್ರವಾಗಿ ಹರಿಯಿತು.

೧೯೦೫ರಲ್ಲಿ ಆಂಗ್ಲರು ಕೇಕು ಕತ್ತರಿಸಿದ ಹಾಗೆ ಬಂಗಾಳವಿಭಜನೆ ಮಾಡಹೊರಟಿದ್ದರಲ್ಲ, ಆಗ ಅದರ ವಿರುದ್ಧ ಹಿಂದೂ ಮುಸ್ಲಿಮರೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಹೋರಾಟಕ್ಕೆ ಹಚ್ಚಿದ್ದು ಈ ‘ವಂದೇ ಮಾತರಂ’ ಘೋಷ. ಬಂಗಾಳ ವಿಭಜನೆಯ ಮೂಲಕ ಯಾರ ನಡುವೆ ಬಿರುಕು ಮೂಡಿಸಬೇಕೆಂದು ಅವರು ಅಲೋಚಿಸಿದ್ದರೋ ಅದೇ ಹಿಂದೂ ಮುಸ್ಲಿಮರು ಜಾತಿ ಭೇದ ಮರೆತು ವಂದೇ ಮಾತರಂ ಘೋಷಣೇಯಡಿಯಲ್ಲಿ ಒಟ್ಟಾದರು, ಆಂಗ್ಲರ ಕುತಂತ್ರಕ್ಕೆ ಮಾರುತ್ತರ ನೀಡಿದರು!

ಬಿಡಿ. ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಸ್ಫೂರ್ತಿ ವಾಕ್ಯವಾಗಿ ಹರಿದುಬಂದು ರಾಷ್ಟ್ರ ಗೀತೆಯಾಗಬೇಕಿದ್ದ ‘ವಂದೇ ಮಾತರಂ’ಆ ಸ್ಥಾನಕ್ಕೆ ಆಯ್ಕೆಯಾಗದೆಹೋಗಿದ್ದು, “ಅದು ಪಾಶ್ಚಾತ್ಯರ ಬ್ಯಾಂಡ್ ಸೆಟ್ಟಿಗೆ ಹೊಂದೋಲ್ಲ” ಅನ್ನುವ ಕಾರಣಕ್ಕೆ! ಈ ಬಾಲಿಶ, ಅಸಹ್ಯಕರ ಕಾರಣ ನೀಡಿದವರ್ಯಾರು ಗೊತ್ತಾ? ನಮ್ಮ ದೇಶದ ಮೊದಲ ಪ್ರಧಾನಿ ಜವಹರ ಲಾಲ ನೆಹರೂ!!

ಕ್ಷಮಿಸಿ. ಹೇಳಹೊರಟಿದ್ದು ವಂದೇ ಮಾತರಂ ‘ಕಾರ್ಯಕ್ರಮ’ದ ಬಗ್ಗೆ.ಏನು ಮಾಡಲಿ?  ಆ ದಿವ್ಯ ಮಂತ್ರ ಸ್ಮರಣೆಗೆ ಬಂದಾಗಲೆಲ್ಲ ಈ ವಿವರಗಳು ಹಿಂಬಾಲಿಸಿ ಬಂದುಬಿಡುತ್ತವೆ.

ಗೀತ ಸಂಧ್ಯಾ

ಶಂಕರ ಶಾನುಭಾಗ್ ಉತ್ತಮ ಸಂಸ್ಕಾರ ಹೊಂದಿರುವ ಸಹೃದಯಿ ಸಂಗೀತ ಕಲಾವಿದರು. ಅವರ ಕಂಠವನ್ನ ‘ಕಂಚಿನ ಕಂಠ’ ಎಂದರೆ ಕ್ಲೀಷೆಯಲ್ಲ ಅನ್ನೋದು, ಅವರ ವಿಶಿಷ್ಟ ಶೈಲಿಯ ವಂದೇ ಮಾತರಂ ಗೀತೆಯ ಗಾಯನದಲ್ಲೇ ಗೊತ್ತಾಗಿಹೋಗುತ್ತದೆ.
ಭಾವಾವಿಶ್ಟರಾಗಿ ಶಾನುಭಾಗ್ ‘ಹೂ ಹರೆಯದ ಹೊಂಗನಸುಗಳೇ… ಏಳಿ ಏಳೀ ಏಳಿ ಎಚ್ಚರಾಗಿ ಕನಸುಕಂಗಳೇ’ ಹಾಡುವಾಗ ಶ್ರೋತೃಗಳ ಮುಖದಲ್ಲಿನ ಹುಮ್ಮಸ್ಸು ನೋದಬೇಕು ನೀವು!
ಶಂಕರರ ತಂಡದಲ್ಲಿನ ಪ್ರತಿಯೊಬ್ಬ ಗಾಯಕ- ಗಾಯಕಿಯೂ ಹೀಗೇ. ಮನದುಂಬಿ, ಅಂತರಾಳದಿಂದ ಹಾಡುತ್ತರೆ. ರಾಷ್ಟ್ರಭಕ್ತಿಯ ಗೀತೆಗಳನ್ನು ಹಾಡುವಾಗ ಅಕ್ಷರಶಃ ಕಣ್ಣೀರುಮಿಡಿಯುತ್ತಾರೆ.

ಭಾನುವಾರದ ಸಂಜೆಯ ಈ ಸುಂದರ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಶಣೆಯಾಗಿದ್ದವರು ದಿವಂಗತ ಕರ್ನಲ್ ವಸಂತರ ತಾಯಿ ಮತ್ತು ಪತ್ನಿ. ಜೊತೆಗೆ, ವಯೋವೃದ್ಧರಾದ ನಿವೃತ್ತ ಕರ್ನಲ್ ಶ್ರೀ ಕಾತ್ಕರ್ ಅವರು.

“ನೀವೆಲ್ಲ ನಿಮ್ಮ ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತೀರಿ. ಅಲ್ಲಿ ನಿಮ್ಮದೇ ಕುಟುಂಬದ ರಕ್ಷಣೆಗಾಗಿ ಯೋಧರು ಜೀವದ ಹಂಗು ತೊರೆದು ನಿಂತಿದ್ದಾರೆ. ಸದಾ ಇದನ್ನು ನೆನಪಿಡಿ. ದಯವಿಟ್ಟು ಯೋಧ ಕುಟುಂಬಗಳೊಡನೆ ಸಹಕರಿಸಿ ಮಾನವೀಯತೆ ತೋರಿ” ಎಂದು ವಿನಂತಿಸುತ್ತ ನಮಗೆ ನಮ್ಮ ಕರ್ತವ್ಯದ ಪಾಠ ಹೇಳಿದವರು ದಿ. ಕರ್ನಲ್ ವಸಂತರ ಪತ್ನಿ.

ಇನ್ನು, ಕರ್ನಲ್ ಕಾಟ್ಕರ್…
ಅವರಂತೂ ಕಾರ್ಯಕ್ರಮದ ಭಾವುಕ ವಾತಾವರಣದಲ್ಲಿ ಸಂಪೂರ್ಣ ಅಮಿಮರೆತಿದ್ದರು.
ಎಂಭತ್ತು ಮೀರಿದ ಈ ವಯಸ್ಸಿನಲ್ಲೂ ಅವರ ಚೀನಾ ಯುದ್ಧದ ಪ್ರತಿ ಕ್ಷಣಗಳು ತಾಜಾ ಆಗಿವೆ. ಅವುಗಳಾಲ್ಲಿ ಕೆಲವನ್ನು ಅವರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಂಚಿಕೊಂಡರು.

ಕರ್ನಲ್ ಹೇಳಿದ ಒಂದು ಘಟನೆ…

“ಲಡಾಖ್ ನಲ್ಲಿ ಶೂನ್ಯಕ್ಕಿಂತ ಅತ್ಯಂತ ಕೆಳಗಿನ ಉಷ್ಣಾಂಶದಲ್ಲಿ ಮಂಜುಗಟ್ಟಿದ ವಾತಾವರಣಾಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆಯೂ  ನಾವು ಚೀನೀಯರ ವಿರುದ್ಧ ಸೆಟೆದು ನಿಂತಿದ್ದೆವು. ನಮಮ್ ಪ್ಲಟೂನ್ ನಲ್ಲಿ ಪ್ರಮೋದ್ ಎನ್ನುವ ತೀರ ಚಿಕ್ಕ ವಯಸ್ಸಿನ ತರುಣ ಸೈನಿಕನಿದ್ದ. ಸದಾಚಟುವಟಿಕೆಯ ಆತ, ವಿಧವೆ ತಾಯಿಯ ಏಕಮಾತ್ರ ಮಗನಾಗಿದ್ದ.
ಅತ್ತ ನಾವು ಮರಗಟ್ಟಿಸುವ ಚಳಿಯಲ್ಲಿ ಹಗಲಿರುಳು ಬಂದೂಕು ಹಿಡಿದು ನಿಂತಿದ್ದಾಗ ಪ್ರಮೋದನ ತಾಯಿಯಿಂದ ಒಂದು ಪತ್ರ ಬಂದಿತು. ಪಾಪ, ಅವರು ಅದನ್ನು ಬರೆದು ಅದೆಷ್ಟು ದಿನವಗಿತ್ತೋ, ಹಿಮದ ಹಾದಿಯಲ್ಲಿ ನಡುಗುತ್ತ, ಕೊನೆಗೂ ಅದು ಅವನ ಕೈ ತಲುಪಿತ್ತು. ಆ ಹೊತ್ತಿಗಾಗಲೇ ಚೀನೀಯರು ನಮಗೆ ತೀರ ಹತ್ತಿರ ಬಂದುಬಿಟ್ಟಿದ್ದರು.
ಅಂತಹ ಉತ್ಕಟ ಕ್ಷಣದಲ್ಲಿ ಆ ತಾಯಿ ಬರೆದ ಸಾಲುಗಳು ಎಂಥವಿತ್ತು ಗೊತ್ತೇ?
“ಮಗೂ, ಚೀನೀಯರು ದೇಶದ ಗಡಿ ದಾಟಲಿದ್ದಾರೆಂದು ಸುದ್ದಿ ಇದೆ. ನೀನದಕ್ಕೆ ಬಿಡಕೂಡದು. ಹಾಗೇನಾದರೂ ಅವರು ದಾಟುವುದೇ ಆದರೆ, ಪ್ರಮೋದನ ಹೆಣದ ಮೇಲೆ ದಾಟಿಕೊಂಡು ಒಳಬರಬೇಕು!”
ನಮ್ಮ ಕೆಚ್ಚು ಹೆಚ್ಚಲಿಕ್ಕೆ ಇನ್ನೇನು ಬೇಕಿತ್ತು? ಕೂಡಲೆ ನಾವೆಲ್ಲ ಸೇರಿ ಆ ತಾಯಿಗೆ ಪತ್ರ ಬರೆದೆವು. “ಅಮ್ಮಾ, ಹಾಗೇನಾದರೂ ಚೀನೀಯರು ದೇಶದೊಳಕ್ಕೆ ನುಗ್ಗುವರೆನ್ನುವುದೇ ಆದರೆ, ಒಬ್ಬನಲ್ಲ, ಆರು ಪ್ರಮೋದರ ಹೆಣ ದಾಟಿ ಬರಬೇಕು. ಹೆದರಬೇಡ, ನಾವು ಜೀವದ ಹಂಗು ತೊರೆದು ಕಾದುತ್ತೇವೆ!”

~

ಹ್ಹ್! ನಮ್ಮ ನಮಮ್ ಕಲ್ಪನೆಯ ಸುಖದ ದ್ವೀಪಗಳಲ್ಲಿ ಬದುಕುತ್ತಿರುವ ನಮಗೆ, ದೇಶಕ್ಕಾಗಿ ಸಾಯೋದು ಅಂದರೇನು ಗೊತ್ತೇ?
ಬೇಡ. ದೇಶಕ್ಕಾಗಿ ಬದುಕಲಿಕ್ಕಾದರೂ….?

Posted in ನಮ್ಮ ನಮ್ಮ ನಡುವೆ | 11 Comments »

ಇತಿಹಾಸದ ಪುಟಗಳಲ್ಲಿ ಮುಲಾಜಿನ ಗೋಜಲು

Posted by Chakravarty on February 7, 2008

shri_ram-20050507-103342.jpg

ರಾಮಾಯಣದ ಅತ್ಯಂತ ಮಹತ್ವದ ತಿರುವ ಕಂಡ ಪ್ರಸಂಗ ಅದು. ದಶರಥ ತಾನು ಕೈಕೇಯಿಗೆ ಯಾವಗಲೋ ಕೊಟ್ಟ ಮಾತನ್ನು ಈಡೇರಿಸಲಿಕ್ಕಾಗಿ ಪಟ್ಟಾಭಿಷಕ್ತನಾಗಬೇಕಿದ್ದ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತೆ ಕೇಳಿಕೊಳ್ಳುತ್ತಾನೆ. ರಾಮನೇನೋ ತಂದೆಯ ಆಜ್ಞಾಪಾಲನೆಗೆ ಸಿದ್ಧನಾಗಿಬಿಟ್ಟ. ಆದರೆ ಲಕ್ಷ್ಮಣನ ಮುಖ ಕೆಂಪುಕೆಂಪಾಯಿತು. “ಅಣ್ಣ, ಅಪ್ಪನನ್ನು ಕೊಂದು ರಾಜ್ಯ ವಶಪಡಿಸಿಕೊಳ್ಳೋಣ” ಎಂದ. ರಾಮ ತಮ್ಮನನ್ನು ಸಂತೈಸುತ್ತ, ” ತಂದೆಯ ಮಾತನ್ನು ನಡೆಸಿಕೊದುವುದೆ ಪುತ್ರಧರ್ಮ. ಅದರಲ್ಲಿಯೆ ನಮಗೆ ಶ್ರೇಯಸ್ಸು” ಎಂದುಬಿಟ್ಟ. ತಂದೆಯ ಮಾತಿಗಾಗಿ ರಾಜ್ಯಬಿಟ್ಟು ತೆರಳಿದ ರಾಮ, ಮರಳಿ ಬರುವ ವೇಳೆಗೆ ಜಗ ಬೆಳಗುವ ರಾಮನಾಗಿ ಬಂದ. ಆದರೆ ಪತ್ನಿಯ ದಾಕ್ಷಿಣ್ಯಕ್ಕೆ ಒಳಗಾಗಿ ಮಗನನ್ನೇ ಕಾಡಿಗೆ ಅಟ್ಟಿದ ದಶರಥ, ಪುತ್ರವ್ಯಾಮೋಹದಲ್ಲಿಯೇ ಕೊನೆಯುಸಿರೆಳೆದ.

~

ಯಾರದೋ ಮರ್ಜಿಗೆ, ಮುಲಾಜಿಗೆ ಒಳಗಾಗಿ ಕೈಗೊಂಡ ನಿರ್ಣಯಗಳು ಮತ್ತೆಲ್ಲೋ ಒಳ್ಳೆಯ ಕೆಲಸ ಮಾಡಿದರೆ ಪುಣ್ಯ. ಅನೇಕ ವೇಳೆ ಅವು ಭವಿಷ್ಯವನ್ನೇ ಮೊಟಕುಗೊಳಿಸುವಂಥಹ ನಿರ್ಣಯಗಳಾಗಿಬಿಡುತ್ತವೆ.
ಧೃತರಾಷ್ಟ್ರ ತನ್ನ ಮಕ್ಕಳಿಗೇ ರಾಜ್ಯ ಸಿಗಬೆಕೆಂದು ಹಟ ಹಿದಿದು ಪಾಂದವರಿಗೆ ಅನ್ಯಾಯ ಮಾಡಿದನಲ್ಲ, ಪರಿಣಾಮ ಏನಾಯ್ತು ಗೊತ್ತ? ಯುದ್ಧ ಮತ್ತು ಸರ್ವನಾಶ! ಧರ್ಮರಾಜ್ಯ ಸ್ಥಾಪನೆಯಾಗಲಿಕ್ಕೆ ಕೃಷ್ಣ ಕಾರಣನಾದ ಎನ್ನುವುದನ್ನು ಬಿಟ್ಟರೆ ಇಡಿಯ ಮಹಾಭಾರತ ಅನೇಕ ತುಮುಲಗಳ ಆಗರವಾಗಿ ಕಾಣುವುದಿಲ್ಲವೇ? ಅತ್ತ ಧೃತರಾಷ್ಟ್ರ ತನ್ನ ಪುತ್ರ ವ್ಯಾಮೋಹದ ಮುಲಾಜಿಗೆ ಒಳಗಾದರೆ, ಅವನ ಮಗ ದುರ್ಯೋಧನ ತನ್ನದೇ ಅಹಂಕಾರದ ದಾಕ್ಷಿಣ್ಯಕ್ಕೆ ಒಳಗಾಗಿದ್ದ. ಕೃಷ್ಣ ಬಂದು ಧರ್ಮೋಪದೇಶ ಮಾಡಿದರೆ,
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ
ಎಂದುಬಿಟ್ಟ.  “ಧರ್ಮ ಗೊತ್ತಿದ್ದರೂ ಆಚರಿಸುವ  ಮನಸಿಲ್ಲ, ಅಧರ್ಮವೆಮ್ದು ತಿಳಿದರೂ ಬಿಡಲು ಮನಸಿಲ್ಲ” ಎಂಡು ತನ್ನ ಅಹಂಕಾರಕ್ಕೆ ಶರಣಾಗಿಬಿಟ್ಟ! ಅಬ್ಬಬ್ಬ… ಈ ಪರಿಯ ದಾಸ್ಯ ಅದೆಷ್ಟು ಕಷ್ಟ, ನಿಕೃಷ್ಟ!?

ಹಲವು ಬಾರಿ ನಂಬಿಕೊಂಡ ಆದರ್ಶಗಳೂ ದಾಕ್ಷಿಣ್ಯವಾಗಿಯೇ ಕಾಡುತ್ತವೆ. ಬಹುಶಃ ಆದರ್ಶಗಳ ಮರ್ಜಿಗೆ ಒಳಗಾಗುವುದು ಅಂದರೆ ಅದೇ ಇರಬೇಕು.

~

ಪೃಥ್ವಿರಾಜ್ ಚೌಹಾನನ ಮೇಲೆ ಮಹಮದ್ ಘೋರಿ ದಾಳಿ ಮಾಡಿದ್ದು ನೆನಪಿಸಿಕೊಳ್ಳಿ. ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಘಟ್ಟ ಅದು. ತರೈನ್ ಎನ್ನುವ ಪ್ರದೇಶದಲ್ಲಿ ಅವರಿಬ್ಬರಿಗೂ ಮುಖಾಮುಖಿಯಾಯ್ತು. ಪೃಥ್ವಿರಾಜನ ಸೇನೆಯೆದುರು ಘೋರಿಯ ಸೇನೆ ಪತರಗುಟ್ಟಿ ಹೋಯಿತು. ಆಮೆಲೇನು?  ಘೋರಿ ಪೃಥ್ವಿರಾಜನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಕ್ಷಮೆ ಯಾರಿಗೆ? ಅದನ್ನು ಪಾತ್ರರಿಗೆ ನೀಡಬೇಕು. ಘೋರಿಯಂತಹ ಅಪಾತ್ರರಿಗಲ್ಲ. ಆದರ್ಶಗಳ ಮುಲಾಜಿಗೆ ಬಿದ್ದ ಪೃಥ್ವಿರಾಜ್ ಚೌಹಾಣ್ ಘೋರಿಯನ್ನು ಕ್ಷಮಿಸಿದ್ದಷ್ಟೇ ಅಲ್ಲ, ಗೌರವಯುತವಾಗಿ ಮರಳಲು ಅನುವು ಮಾಡಿಕೊಟ್ಟ ಕೂಡ!
ಮರು ವರ್ಷವೇ ತರೈನ್ ನಲ್ಲಿ ಮತ್ತೆ ದಾಳಿಯಾಯ್ತು. ಈ ಬಾರಿ ತನ್ನವರೇ ಮೋಸ ಮಾಡಿದುದರ ಫಲವಾಗಿ ಚೌಹಾನನ ಸೇನೆ ಸೋತಿತು. ಘೋರಿಯ ಕೈ ಮೇಲಾಯ್ತು. ಆತ ಚೌಹಾನನನ್ನು ಬಂಧಿಸಿ, ತನ್ನೂರಿಗೆ ಕರೆದೊಯ್ದ. ಅಲ್ಲಿ ಅವನ ಎರಡೂ ಕಣ್ಣೂಗಳನ್ನು ಕೀಳಿಸಿ ಬರ್ಬರ ಕೊಲೆ ಮಾಡಿಸಿದ.
ಅದಕ್ಕೇ ಹೇಳೋದು. ಅಯೋಗ್ಯರಿಗೆ ಒಳ್ಳೆಯದನ್ನು ಮಾಡಬಾರದೆಂಬುದೂ ಒಂದು ಆದರ್ಶ. ಏನಂತೀರಿ?

ray_sirajuddaula.jpg

೧೭೫೭ರಲ್ಲೂ ಹಾಗೇ ಆಯಿತು. ಸಿರಾಜುದ್ದೌಲ ಬಂಗಾಳಾದ ನವಾಬನಾಗಿದ್ದಾಗ ಆಂಗ್ಲರ ವಿರುದ್ಧ ತಿರುಗಿ ಬಿದ್ದ. ಪೋರ್ಟ್ ವಿಲಿಯಂ ಮೇಲೆ ಏರಿ ಹೋದ. ಪತರಗುಟ್ಟಿದ ರಾಬರ್ಟ್ ಕ್ಲೈವ್, ಸಿರಾಜುದ್ದೌಲನ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್  ಜಾಫರನನ್ನು ಒಲಿಸಿಕೊಂಡ. ರಾಜ್ಯದ ಆಮಿಷ ತೋರಿದ. ಈ ಬಾರಿ ಮೀರ್ ಜಾಫರ್ ಯುದ್ಧಕ್ಕೆ ಮುನ್ನ ನವಾಬನ ಬಳಿ ಹೋಗಿ, “ನನ್ನಂತಹ ಸೇನಾಪತಿ ಇರುವಾಗ ನವಾಬರೇ ಯುದ್ಧಕ್ಕೆ ಬರುವುದು ಸರಿಯಲ್ಲ, ಹಾಗೆ ಮಾಡಿದರೆ ಅದು ನನ್ನ ಸಾಮರ್ಥ್ಯಕ್ಕೆ ಅವಮಾನ ಮಾಡಿದಂತೆ. ಬೆರಳೆಣಿಕೆಯಷ್ಟಿರುವ ಆಂಗ್ಲರನ್ನು ಸೋಲಿಸಿ ಬರುತ್ತೇನೆ” ಎಂದ. ನವಾಬನಿಗೂ ಹೌದೆನ್ನಿಸಿತು. ತನ್ನ ಸೇನಾಪತಿಗೆ ಅವಮಾನ ಮಾಡುವುದು ಸರಿಯೇ ಅನ್ನುವ ದ್ವಂದ್ವ ಅವನನ್ನು ಕಾಡಿತು. ಮೀರ್ ಜಾಫರನ ಮುಲಾಜಿಗೆ ಒಳಗಾದ. ಭಾರತದ ಇತಿಹಾಸವೇ ಬದಲಾಯ್ತು. ರಾಬರ್ಟ್ ಕ್ಲೈವ್ ಕದನದಲ್ಲಿ ಸಲೀಸಾಗಿ ಗೆದ್ದ. ನವಾಬನನ್ನು ಪದಚ್ಯುತಗೊಳಿಸಿ ಮೀರ್ ಜಾಫರನನ್ನು ಪಟ್ಟಕ್ಕೇರಿಸಲಾಯ್ತು. ಬ್ರಿಟನ್ನಿನ ಪ್ರಭುತ್ವ ಭಾರತದಲ್ಲಿ ಸ್ಥಿರವಾಗಲು ಅದೊಂದು ಹೆದ್ದಾರಿಯಾಯ್ತು. ಒಂದು ನಿರ್ಧಾರ ಇತಿಹಾಸ ಬದಲಿಸುವ ಎಂತಹ ಕೆಲಸ ಮಾಡಿತು ನೋಡಿ!

~

ಗಾಂಧೀಜಿಯೂ ಇಂತಹ, ಇತರರಿಂದ ಪ್ರಭಾವಿತರಾದ ನಿರ್ಣಯ ಕೈಗೊಳ್ಳುತ್ತಲೇ ಇದ್ದರು. ಅವರು ನೆಹರೂರನ್ನು ತಮ್ಮ ಉತ್ತರಾಧಿಕಾರಿ ಎಂದು ಕರೆದಿದ್ದು ಏಕೆ ಎಂಬ ಪ್ರಶ್ನೆ ಒಂದು ಹಂತದ ನಂತರ ಅವರನ್ನೇ ಕಾಡಿರಲಿಕ್ಕೆ ಸಾಕು. ಮೋತೀಲಾಲ ನೆಹರೂ ಕಾಂಗ್ರೆಸ್ ಪಾರ್ಟಿಗೆ ತುಂಬಾ ದುಡಿದಿದ್ದರು ಎಂಬ ದಾಕ್ಷಿಣ್ಯವ? ಅಥವಾ ಶೋಕೀಲಾಲನಾಗಿದ್ದ ಯುವಕ ತನ್ನ ಚಿಂತನೆಗಳಿಗೆ ಮನಸೋತು ಬಂದಿದ್ದಾನೆಂಬ ಮುಲಾಜಿಗೋ? ದೇವರೇ ಬಲ್ಲ. ಹಾಗೆ ನೋದಿದರೆ ಯಾವ ಕಾರಣಕ್ಕೂ ನೆಹರೂ ಗಾಂಧೀಜಿಯ ಉತ್ತರಾಧಿಕಾರಿಯಾಗುವ ಯೋಗ್ಯತೆ ಹೊಂದಿರಲಿಲ್ಲ. ಗಾಂಧೀಜಿಯ ಸ್ವದೇಶೀ ಚಿಂತನೆಗಳು ಯೋಚಿಸಲಿಕ್ಕೂ ಅನರ್ಹ ಎಂದವರು ನೆಹರೂ. ಗಾಂಧೀಜಿಯಷ್ಟು ಸತ್ಯಪರಾಯಣತೆ, ಆದರ್ಶಗಳಿಗೆ ಬದ್ಧತೆ, ಇವ್ಯಾವುವೂ ಅವರಿಗಿರಲಿಲ್ಲ. ಅಷ್ಟಾದರೂ ಗಾಂಧೀಜಿ ಮೈಮರೆತು ನೆಹರೂಗೆ ಅಷ್ಟು ಮಹತ್ವದ ಸ್ಥಾನ ಕೊಟ್ಟರು. “ನನ್ನ ನಂತರ ನೆಹರೂ ನನ್ನ ಮಾತಾಡುತ್ತಾರೆ” ಎಂದುಬಿಟ್ಟರು. ಕಾಂಗ್ರೆಸ್ಸಿನ ಸೆಂಟ್ರಲ್ ಕಮಿಟಿ ಪಟೇಲರೇ ದೇಶದ ಪ್ರಧಾನಿಯಾಗಲಿ ಎಂದು ಘಂಟಾಘೋಷವಾಗಿ ಹೇಳಿದರೂ ಗಾಂಧೀಜಿ ಮನಸ್ಸು ಮಾಡಲಿಲ್ಲ.

ಪ್ರಧಾನ ಮಂತ್ರಿಗಿರಿ ಪಡೆದು ಆಳುವ ಖುರ್ಚಿಯೇರಿದ ನೆಹರೂ, ಖುರ್ಚಿ ತಪ್ಪಿಸಿಕೊಂಡ ನೆಹರೂನಷ್ಟು ಅಪಾಯಕಾರಿಯಲ್ಲ ಅಂತ ಗಾಂಧೀಜಿಗೆ ಅನಿಸಿತ್ತಾ? ಅಥವಾ ಅವರಪ್ಪನಿಗೆ ಮಾತು ಕೊಟ್ಟಿದ್ದೇನೆಂಬ ಒಂದೇ ಕಾರಣಕ್ಕೆ, ಆ ದರ್ದಿಗೆ ಅವರನ್ನು ಪ್ರಧಾನಿಯಾಗಲು ಬಿಟ್ಟರಾ?
ಏನೇ ಆಗಲಿ, ಆ ನಿರ್ಣಯ ರಾಷ್ಟ್ರದ ಪಾಲಿಗೆ ಭಯಾನಕವಾಗಿದ್ದನ್ನು ಮಾತ್ರ ಯಾರೂ ಅಲ್ಲಗಳೆಯಲಾರರು.

withnehru.gif

ಈ ನಡುವೆ ಪಟೇಲರಿಗೆ ಯಾವ ಮುಲಾಜಿತ್ತು ಎಂಬುದೂ ಪ್ರಶ್ನೆಯೇ. ಉಗ್ರ ಪ್ರತಾಪಿಯಾಗಿದ್ದ ಪಟೇಲರು ಗಾಂಧೀಜಿಯನ್ನು ಧಿಕ್ಕರಿಸದೆ ಉಳಿದ ಕಾಅರ್ಣವೆನು? ಗಾಂಧೀಜಿಯ ಸಮಸ್ಯೆಗಳ ಅರಿವು ಪಟೇಲರಿಗಿತ್ತಾ? ಪಟೇಲರೂ ಗಾಂಧೀಜಿಯ ದಾಕ್ಷಿಣ್ಯಕ್ಕೆ ಒಳಗಾಗಿದ್ದರಾ? ಪ್ರಶ್ನೆ ಆಳಕ್ಕಿಳಿಯುತ್ತಲೇ ಹೋಗುತ್ತದೆ. ಅಲ್ಲವೇ?

ಈ ಕಾರಣಗಳಿಂದಾಗಿ ದೇಶ ದಾರಿ ತಪ್ಪಿತೆಂದಷ್ಟೇ ಹೇಳಬಹುದು. ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರ ಆಹುತಿಯಾಯ್ತು. ಆನಂತರದ ಪಂಚವಾರ್ಷಿಕ ಯೋಜನೆಗಳ ಭಾರದಲ್ಲಿ ದೇಶ ನಲುಗಿತು. ಹಳಿ ತಪ್ಪಿದ್ದ ಶಿಕ್ಷಣ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಕೃಷಿ ವ್ಯವಸ್ಥೆ, ಯಾವುವೂ ಮತ್ತೆ ಸರಿದಾರಿಗೆ ಬರಲೇ ಇಲ್ಲ. ಒಂದು ತಪ್ಪು ನಿರ್ಣಯ ಭಾರತವನ್ನು ಎರಡನೇ ಬಾರಿಗೆ  ಗುಲಾಮಗಿರಿಗೆ ನೂಕಿತೆಂದರೆ ತಪ್ಪಿಲ್ಲ.

ದಾಕ್ಷಿಣ್ಯಕ್ಕೆ ಬಸಿರಾಗುವ ಈ ಪ್ರಕ್ರಿಯೆ ಸ್ವಾತಂತ್ರ್ಯಾನಂತರವೂ ನಿಲ್ಲಲಿಲ್ಲ. ನಮ್ಮ ಮೇಲೆ ದಾಳಿ ಮಾಡಿ ನಮ್ಮ ಭೂಮಿಯನ್ನೇ ವಶಪಡಿಸಿಕೊಂಡ ಚೀನಾದ ವಿರುದ್ಧ ನಾವು ಮಾತಾಡಲೂ ಇಲ್ಲ. ದೇಸದೊಳಗಿನ ಚೀನಾ ನಿಷ್ಠ ಕಮ್ಯುನಿಸ್ಟರು ಬೇಸರಗೊಂಡರೆ!? ಎಂಬ ನೋವು ನಮಗೆ.

~

ಕಳೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಬಡಿದೆವಲ್ಲ, ಆಗಲೂ ನಮ್ಮದು ದಾಕ್ಷಿಣ್ಯವೇ. ಆರಂಭದಲ್ಲಿ ನಾವು ಕೆಳಗಿದ್ದೆವು, ಉಗ್ರರು ಮೇಲಿದ್ದರು. ಆಗ ಸಂಧಾನದ ಮಾತಿರಲಿಲ್ಲ. ನಮ್ಮ ಸೈನಿಕರು ಸಾಹಸಗೈದು ಮೇಲೇರುತ್ತಿದ್ದಂತೆ ಪಾಕ್ ಸೈನ್ಯ ತತ್ತರಿಸಿಬಿಟ್ಟಿತು. ಎಂದಿನಂತೆ ನಮ್ಮ ಸರ್ಕಾರ ಅಮೆರಿಕದ ಮುಲಾಜಿಗೆ ಒಳಗಾಗಿ ಪಾಕ್ ಸೈನಿಕರಿಗೆ ಮುಕ್ತಮಾರ್ಗ ತೋರಿಸಿತು. ನಮಮ್ ಸೈನಿಕರೇ ಅವರ ರಕ್ಷಣೆಗೆ ನಿಂತು ಅವರನ್ನು ಅವರ ದೇಶಕ್ಕೆ ಕಲೀಸಬೇಕಾಯ್ತು! ಇದಕ್ಕಿಂತ ಹೀನ ಸ್ಥಿತಿ ಯಾವುದೂ ಇಲ್ಲ ಅಂದ್ಕೊಂಡ್ರಾ?

ಖಂಡಿತ ಇದೆ. ಮೌಲಾನಾ ಮಸೂದ್ ಅಜರ್ ಬಿಡುಗಡೆಗೆಂದು ಉಗ್ರರು ವಿಮಾನಾಪಹರಣ ಮಾಡಿದ್ದು ನೆನಪಿಸಿಕೊಳ್ಳಿ. ಅವತ್ತು ವಿಮಾನದಲ್ಲಿದ್ದ ಆ ಪ್ರಯಾಣಿಕರ ಮನೆಯವರು ಗಲಾಟೆ ಮಾಡಿದರೆಂಬ ಕಾರಣಕ್ಕೆ ಈ ದೇಶದ ವಿದೇಶಾಂಗ ಸಚಿವರು ವಿಮಾನದಲ್ಲಿ ಆ ಉಗ್ರಗಾಮಿಯನ್ನು ತಮ್ಮೊಂದಿಗೆ ಕುಳ್ಳರಿಸಿಕೊಂಡು ಬಿಟ್ಟು ಬಂದರಲ್ಲ, ಅದು ಯಾವ ಮಟ್ಟದ ಕೃತ್ಯ, ನೀವೇ ಹೇಳಿ…  ಪ್ರತಿ ಬಾರಿಯೂ ಹೀಗೇ ಆದರೆ?

ಇವೆಲ್ಲಕ್ಕೂ ಕಿರೀಟಪ್ರಾಯವಾದಂಥದ್ದು, ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವಿನ ಕಥೆ. ಬರಿಯ ಓಟಿನ ದಾಕ್ಷಿಣ್ಯಕ್ಕೆ ಬಿದ್ದು ಅವನನ್ನು ನೇಣಿಗೇರಿಸದೆ ಕುಳಿತಿದ್ದಾರಲ್ಲ, ಈ ನಿರ್ಣಯ ಸರಿಯಾ?

ಹುಡುಕುತ್ತ ಹೋದರೆ ಅಸಂಖ್ಯ ಘಟನೆಗಳಿವೆ. ಯಾವುದೇ ನಿರ್ಧಾರದ ಹಿಂದೆ ದೂರಾಲೋಚನೆ ಇರಬೇಕು. ಹಾಗಾಗಬೇಕೆಂದರೆ ಆ ನಿರ್ಧಾರಕ್ಕೆ ದಾಕ್ಷಿಣ್ಯದ ಸೋಂಕು ತಾಕಬಾರದು. ಯಾರದೋ ಮುಲಾಜಿಗೆ, ಮರ್ಜಿಗೆ, ದರ್ದಿಗೆ ಒಳಗಾದರೆ ಅಂದುಕೊಂಡ ಕಾರ್ಯ ಯಶಸ್ವಿಯಾಗಲಾರದು. ಅಲ್ಲವೇ?
 

Posted in ದಿಲ್ ಹೈ ಹಿಂದೂಸ್ಥಾನಿ | 4 Comments »

ಗಾಂಧಿ ಎಂಬ ‘ಮಹಾತ್ಮ’

Posted by Chakravarty on February 2, 2008

ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿರ್ಮಣ ಮಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲಾರದೆಂದರೆ ತಿರಸ್ಕರಿಸೋಣ. ಒಬ್ಬೊಬ್ಬ ಹಿಂದೂವಿನಿಂದಲೂ ಹಣ ಸಂಗ್ರಹಿಸೋಣ. ಅಲ್ಲಿನ ಒಂದೊಂದು ಇಟ್ಟಿಗೆಯೂ ಹಿಂದೂವಿನದೇ ಆಗಿರಲಿ’ ಎಂದವರು ಗಾಂಧೀಜಿ! ಪಟೇಲರ ಶಕ್ತಿ ನೂರ್ಮಡಿಯಾಯಿತು. ಸೋಮನಾಥ ದೇವಾಲಯದ ನಿರ್ಮಾಣಕ್ಕೆ ಮುಂದಡಿಯಿಟ್ಟರು.

ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದ ಸಮಯ. ನೌಖಾಲಿಯಲ್ಲಿ ಇದ್ದಕ್ಕಿದ್ದ ಹಾಗೆ ದೊಂಬಿಗಳು ಶುರುವಿಟ್ಟವು. ಮುಸಲ್ಮಾನರು ಹಿಂದೂಗಳ ಮೇಲೆ ಆಘಾತಕಾರಿ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ತಿರುಗಿಬೀಳುವ ಹೊತ್ತಿಗೆ ಸರಿಯಾಗಿ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಹು ಸಂಖ್ಯಾತ ಮುಸಲ್ಮಾನರು ಹಿಂದೂಗಳನ್ನು ಕೊಲ್ಲತೊಡಗಿದರು. ಮೌಂಟ್ ಬ್ಯಾಟನ್ ೧೫ ಸಾವಿರ ಸೈನಿಕರನ್ನು ಅತ್ತ ಕಳಿಸಿಕೊಟ್ಟ. ನೌಖಾಲಿಗೆ ಗಾಂಧೀಜಿ ಒಬ್ಬಂಟಿ ಹೊರಟರು. “ಅಲ್ಲಿನ ಹಿಂದೂಗಳನ್ನು ನೀವು ರಕ್ಷಿಸಿ, ಇಲ್ಲಿನ ಮುಸಲ್ಮಾನರನ್ನು ರಕ್ಷಿಸುವ ಹೊಣೆ ನನಗಿರಲಿ” ಎಂದರು. ರಕ್ತಪಾತ ನಿಲ್ಲುವವರೆಗೆ ಉಪವಾಸ ಕುಳೀತುಕೊಳ್ಳುತ್ತೇನೆ ಎಂದರು. ಸೇಡಿನ ಕಿಚ್ಚಿನಿಂದ ಹಪಹಪಿಸುತ್ತಿದ್ದವರೂ ಗಾಂಧೀಜಿಯ ಮುಂದೆ ಮಂಡಿಯೂರಿ ಕುಳಿತರು. ಮೌಂಟ್ ಬ್ಯಾಟನ್ ಉದ್ಗರಿಸಿದ. “ದಂಗೆ ನಿಯಂತ್ರಿಸಿದ್ದು ಎರಡು ಸೇನೆಗಳು. ಒಂದೆಡೆ ೧೫ಸಾವಿರ ಸೈನಿಕರ ಸಮೂಹ, ಇನ್ನೊಂದೆಡೆ ಸಿಂಗಲ್ ಮ್ಯಾನ್ ಆರ್ಮಿ- ಗಾಂಧೀ!!”

 ಇವು ಅಷ್ಟಾಗಿ ಚರ್ಚೆಗೆ ಬರದ ಗಾಂಧೀಜಿಯವರ ಚಿತ್ರಣಗಳು. ಗಾಂಧೀಜಿಗೆ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅಪಾರ ಗೌರವ. ಗೀತೆಯ ಬಗ್ಗೆ ಅವರು ಸೊಗಸಾಗಿ ಬರೆದಿದ್ದಾರೆ. ರಾಷ್ಟ್ರದ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಹೇಳುತ್ತಾರೆ. ಇಷ್ಟಾಗಿಯೂ ಹಿಂದೂಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅತ್ತ ಮುಸಲ್ಮಾನರು ಗಾಂಧೀಜಿಯನ್ನು ಹಿಂದೂಗಳ ನಾಯಕರೆಂದು ದೂರೀಕರಿಸುತ್ತಾರೆ. ಯಾವ ಹರಿಜನರ ಉದ್ಧಾರಕ್ಕಾಗಿ ತಮ್ಮ ಬದುಕಿನ ಪ್ರತಿಯೊಂದು ಹನಿ ಬೆವರನ್ನೂ ಸುರಿಸಿದರೋ, ಅದೇ ಹರಿಜನರ ಪಾಲಿಗೆ ಗಾಂಧೀಜಿ ಮೆಚ್ಚಿನ ನಾಯಕರಲ್ಲ. ಇತ್ತ ಮೇಲ್ವರ್ಗದ ಜನ ಕೂಡ ಅವರನ್ನು ಆರಾಧಿಸುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಗಾಂಧೀಜಿಯೇ ಅಸ್ಪೃಶ್ಯರಾಗಿಬಿಟ್ಟರು!

ದೇಶ- ಧರ್ಮಗಳ ಚಿಂತನೆ ಮಾಡದೇ, ಅನ್ಯಾಯವನ್ನು ಪ್ರತಿಭಟಿಸದೇ ಎಲ್ಲರಂತೆ ಇದ್ದುಬಿಟ್ಟಿದ್ದರೆ ಅವರೊಬ್ಬ ಶ್ರೀಮಂತ ಬ್ಯಾರಿಸ್ಟರ್ ಆಗಿರುತ್ತಿದ್ದರು. ಹಾಗಾಗಲಿಲ್ಲ. ಶ್ರೀಮಂತಿಕೆಯ ಬದುಕಿಗೊಂದು ಸಲಾಮು ಹೊಡೆದು, ತುಂಡು ಧೋತಿ ಧರಿಸಿ ರಾಷ್ಟ್ರ ಸೇವೆಗೆ ಧುಮುಕಿದರು. ಯಾವ ವರ್ಗವನ್ನು ವಿವೇಕಾನಂದರ ನಂತರ ಯಾರೂ ಪ್ರತಿನಿಧಿಸಿರಲಿಲ್ಲವೋ ಅಂಥಹ ಬಡ- ದರಿದ್ರರ ದನಿಯಾದರು. ವಿದೇಶದಲ್ಲಿರುವಾಗಲೇ ಬಿಳಿಯರು ಕರಿಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು. “ಹೊಡೆದರೆ ಹೊಡೆಸಿಕೊಳ್ಳಿ. ಬಡಿದರೆ ಬಡಿಸಿಕೊಳ್ಳಿ. ಬಡಿಯುವವರು ಎಷ್ಟೂಂತ ಬಡಿದಾರು? ” ಎಂಬ ಸಿದ್ಧಾಂತವನ್ನು ಹೋರಾಟಗಾರರ ಕೈಗಿತ್ತರು. ದಬ್ಬಾಳಿಕೆಗೆ ಒಳಗಾದವರೂ ಮೊದಲು ಇವರನ್ನು ವಿರೋಧಿಸಿದರು. ಆಮೇಲೆ ಅಪಹಾಸ್ಯಗೈದರು. ಇಷ್ಟಾದರೂ ಆಸಾಮಿ ಜಗ್ಗದಿದ್ದಾಗ ಅವರನ್ನೇ ಅನುಸರಿಸಿದರು! ತಮ್ಮ ನಾಯಕನಾಗಿ ಸ್ವೀಕರಿಸಿದರು. ದೂರ ದೇಶದಿಂಡ ಬಂದವನೊಬ್ಬ ನೊಂದವರ ಕಣ್ಣೀರೊರೆಸುವುದು ತಮಾಷೆಯ ಕೆಲಸವಲ್ಲ. ಇಡೀ ಬ್ರಿಟಿಷ್ ಸಮುದಾಯ ಹೋರಾಟಾದ ಈ ಹೊಸ ಅಸ್ತ್ರಕ್ಕೆ ಬೆದರಿತು. ಇಂಗ್ಲೆಂಡಿನ ಪತ್ರಿಕೆಗಳೂ ಅವರನ್ನು ಹಾಡಿ ಹೊಗಳಿದವು. ನೋಡನೋಡುತ್ತಿದ್ದಂತೆಯೇ ಗಾಂಧೀಜಿ ಕಣ್ಣೂಕೋರೈಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದರು.

ಇದೇ ಜಾಗತಿಕ ಖ್ಯಾತಿಯೊಂದಿಗೆ ಅವರು ಭಾರತಕ್ಕೆ ಬಂದಾಗ ಇಲ್ಲಿನ ಎಲ್ಲ ವರ್ಗಗಳೂ ಆಸಕ್ತಿಯಿಂದ ಕಾದಿದ್ದವು. ಗಾಂಧೀಜಿ ಅದ್ಭುತ ವಾಗ್ಮಿಯೇನಲ್ಲ. ಆದರೂ ಅವರು ಮಾತಾಡಲಿಕ್ಕೆ ನಿಂತರೆ ಜನಸ್ತೋಮವಿಡೀ ನಿಶ್ಶಬ್ದವಾಗುತ್ತಿತ್ತು. ಗಾಂಧೀಜಿಯವರ ಒಂದೊಂದು ಮಾತನ್ನೂ ವ್ಯರ್ಥವಾಗಲು ಬಿಡದೆ ಕೇಳಿಸಿಕೊಳ್ಳುವ ಶ್ರದ್ಧೆಯಿರುತ್ತಿತ್ತು. ಅದು, ಗಾಂಧೀಜಿ ವ್ಯಕ್ತಿತ್ವದ ತಾಖತ್ತು.

ಕ್ರಾಂತಿಕಾರಿಗಳ ಹೋರಾಟ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಾಗ, ಗಾಂಧೀಜಿ ರಾಷ್ಟ್ರೀಯ ಚಳುವಳಿಯನ್ನು ಅತಿ ಕೆಳ ವ್ಯಕ್ತಿಯವರೆಗೂ ಕೊಂಡೊಯ್ದಿದ್ದರು. ಅಸಹಕಾರ ಚಳುವಳಿಗೆಂದು ಗಾಂಧೀಜಿ ನೀದಿದ ಒಂದೇ ಕರೆಗೆ ದೇಶದ ಎಲ್ಲ ವರ್ಗದ ಜನ ಸೆಟೆದು ನಿಂತಿದ್ದರು. ತಿಲಕರು ಸ್ವರಾಜ್- ಸ್ವದೇಶ್ ಪದಗಳನ್ನು ಹುಟ್ಟುಹಾಕಿದರು. ನಿಜ. ಗಾಂಧೀಜಿ ಅವುಗಳ ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗವನ್ನು ಜನರ ಮುಂದಿಟ್ಟರು.

ಗಾಂಧೀಜಿ ಮತ್ತು ಸುಭಾಷರ ಬಾಂಧವ್ಯದ ಬಗ್ಗೆಯೂ ಒಂದಷ್ಟು ವಿಷಯಗಳನ್ನು ಬೇಕೆಂದೇ ಮುಚ್ಚಿಡಲಾಗುತ್ತದೆ. ಅವರಿಬ್ಬರ ಸಂಬಂಧ ತಂದೆ- ಮಗನಂತಿತ್ತು ಅನ್ನೋದು ಬಹಳ ಜನರಿಗೆ ಗೊತ್ತೇ ಇಲ್ಲ. ಪತ್ರ ಬರೆವಾಗಲೆಲ್ಲ ಗಾಂಧೀಜಿ “ನಮ್ಮಲ್ಲಿನ ವೈಚಾರಿಕ ಭೇದ ನಮ್ಮ ಸಂಬಂಧಕ್ಕೆ ಧಕ್ಕೆ ತರಬಾರದು” ಎನ್ನುತ್ತಿದ್ದರು. ಒಮ್ಮೆಯಂತೂ ಪತ್ರದಲ್ಲಿ “ನನ್ನ ನಿನ್ನ ವಿಚಾರಗಳು ವಿಮುಖವಾದವು. ನಾನು ಮುದುಕ, ನೀನು ತರುಣ. ನಿನ್ನ ಚಿಂತನೆ- ವಾದಗಳೇ ಸರಿಯಾಗಿರಲಿ ಎಂದು ಆಶಿಸುತ್ತೆನೆ. ನಿನ್ನ ವಾದದಿಂದಲೇ ದೇಶಕ್ಕೆ ಲಾಭ ಎನ್ನುವುದಾದರೆ ನಾನು ಮಾಜಿ ಸತ್ಯಾಗ್ರಹಿಯಾಗಿ ನಿಷ್ಠೆಯಿಂದ ನಿನ್ನನ್ನು ಅನುಸರಿಸುತ್ತೇನೆ” ಎಂದಿದ್ದರು. ನಮ್ಮ ಸುಭಾಷ್ ದೇಶಭಕ್ತರ ಗುಂಪಿನಲ್ಲಿ ಮಿಂಚುವ ವೀರ ಎಂದು ಹೆಮ್ಮೆಪಡುತ್ತಿದ್ದರು. ಇನ್ನೊಂದೆಡೆ ಸುಭಾಷರು ಗಾಂಧೀಜಿ ರಾಷ್ಟ್ರಕ್ಕೇ ತಂದೆಯಿದ್ದಂತೆ, ಅವರೇ ‘ರಾಷ್ಟ್ರ ಪಿತ’ ಎಂದು ಹೇಳಿದ್ದರು!

ನಮ್ಮ ಕ್ರಾಂತಿಕಾರಿಗಳೆಲ್ಲ ಫ್ರಾನ್ಸು, ಅಮೆರಿಕ, ಜರ್ಮನಿ, ಇಟಲಿಗಳಿಂದ ಸ್ಫೂರ್ತಿಪಡೆದವರು, ಅಲ್ಲಿನ ಹೋರಾಟ ಕ್ರಮವನ್ನು ಅನುಸರಿಸಿದವರು. ಆದರೆ ಗಾಂಧೀಜಿ ಮಾತ್ರ ಈ ದೇಶದ ಸಂಸ್ಕೃತಿಯ ಆಳದಿಂದೆದ್ದು ಬಂದ ಸತ್ಯ- ಅಹಿಂಸೆಗಳೊಂದಿಗೆ ಹೋರಾಟ ಸಂಘಟಿಸಿದವರು. ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು!

ಅವರ ಆತ್ಮ ಕಥೆಯಲ್ಲಿ ಗಾಂಧೀಜಿ ಬರೆದುಕೊಂಡಿದ್ದಾರೆ, “ತಂದೆಸಾವಿನ ಜೊತೆ ಸೆಣಸುತ್ತಿದ್ದಾಗ, ನಾನು ಅವರ ಕಾಲು ಒತ್ತುವುದು ಬಿಟ್ಟು ಹೆಂಡತಿಯೊಡನೆ ಸರಸದಲ್ಲಿದ್ದೆ. ತಂದೆ ಸತ್ತ ವಿಷಯ ತಿಳಿದಿದ್ದೂ ಆಗಲೇ! ನನಗೆ ಅಂದು ನನ್ನ ಮೇಲೇ ಅಸಹ್ಯವಾಗಿತ್ತು” ಅಂತ. ಆ ಪರಿ ಎತ್ತರಕ್ಕೇರಿರುವ ಮನುಷ್ಯ ಈ ಪರಿಯ ಸತ್ಯಗಳನ್ನು ಹೇಳಬಹುದು ಅನ್ನಿಸುತ್ತಾ? ಯೋಚಿಸಿ. ಅದು ಗಾಂಧೀಜಿಗೆ ಮಾತ್ರ ಸಾಧ್ಯ. ಅದಕ್ಕೇ, ಅವರು ‘ಮಹಾತ್ಮ’!

Posted in ದಿಲ್ ಹೈ ಹಿಂದೂಸ್ಥಾನಿ | 7 Comments »

ಮಗೂ, ಶ್ವೇತಕೇತೂ….

Posted by Chakravarty on January 20, 2008

ಅಹಂಕಾರದಿಂದ ಬೀಗಿದ ಮಗ
ಅಪ್ಪನೆದುರು ನಿಂತ.
“ತಂದೆ, ನಾ ಎಲ್ಲ ಕಲಿತಿರುವೆ
ನಿನಗಿಂತ ನಾ ತಿಳಿದವನೀಗ”
ಎಂದ.

ಅಪ್ಪ ನಕ್ಕ,
“ಓಹೋ! ಯಾವುದನರಿತು
ಮತ್ತೇನೂ ಕಲಿಯಬೇಕಿಲ್ಲವೋ ಅದನ್ನೂ….
ಅದನ್ನೂ ಅರಿತುಬಿಟ್ಟೆಯಾ!?”
ಮಗ ತಬ್ಬಿಬ್ಬು.

ಅಪ್ಪ ಕೇಳುತ್ತಲೇ ಹೋದ,
ಯಾರು ನೀನು?
ನೀನು ಯಾರು?
ದೇಹ ನೀನಾದರೆ, ನಿನ್ನ ಶವ ನೀನಾ?
ಮನವು ನೀನಾದರೆ, ಬುದ್ಧಿ ಯಾರದು?
ಬುದ್ಧಿ ನೀನಾದರೆ, ಚೈತನ್ಯವದೆಲ್ಲಿ?
ತಿಳಿಯಲಿರುವುದದೆಷ್ಟು?
ಇದನರಿತರೆ ಉಳಿಯುವುದು ಇನ್ನೆಷ್ಟು!?

ಮಗೂ ಶ್ವೇತಕೇತು,
ನಿನ್ನನರಿ.
ನಿನ್ನನರಿ, ನಿನ್ನನರಿ.
ಅದಕ್ಕಾಗಿ ‘ನಿನ್ನ’ ಮರಿ!

Posted in ಕವಿತೆಯಂತೆ... | 1 Comment »

ವಾಲ್ ಮಾರ್ಟ್ ಮತ್ತು ಇತಿಹಾಸದ ಪಾಠ…

Posted by Chakravarty on January 11, 2008

ಎಲ್ಲರಿಗೂ ನಮಸ್ತೇ.

ವಿಕ್ರಮ್ ಹತ್ವಾರ್ ಅವರು ತಮ್ಮ ಕಮೆಂಟಿನಲ್ಲಿ ವಾಲ್ ಮಾರ್ಟ್ ಬಗ್ಗೆ ಮಾತನಾಡಿದ್ದರು. ಹೀಗೆ ವಾಲ್ ಮಾರ್ಟ್ ವಿಷಯ ಬಂದಾಗ ನಾನು ಹೇಳಲೇಬೇಕಾದ ಒಂದಷ್ಟಿದೆ. ಅದನ್ನೀಗ ಇಲ್ಲಿ ನಿಮ್ಮೆದುರಿಡುವೆ.

ನಿಮ್ಮಲ್ಲಿ ಬಹುತೇಕರಿಗೆ ಶೂ ಕಂಪೆನಿಯ ಸೇಲ್ಸ್ ಮನ್ ಗಳಿಬ್ಬರು ಆಫ್ರಿಕಾಕ್ಕೆ ಹೋದ ಹಳೆಯ ಕಥೆ ಗೊತ್ತಿರಬಹುದು.
ಹಾಗೆ ಹೋದ ಇಬ್ಬರಲ್ಲಿ ಒಬ್ಬ ವಾಪಸು ಬಂದು ಮ್ಯಾನೇಜರನ ಬಳಿ ದೂರಿದ. “ಅಲ್ಲಿನ ಜನರಿಗೆ ಶೂ ಅಂದರೇನೆಂದೇ ಗೊತ್ತಿಲ್ಲ, ಅಲ್ಲಿ ವ್ಯಾಪಾರ ಕಷ್ಟ!” ಸ್ವಲ್ಪ ಹೊತ್ತಿನಲ್ಲೇ ಮತ್ತೊಬ್ಬ ಏದುಸಿರು ಬಿಡುತ್ತಾ ಬಂದು ಹೇಳಿದ, ” ನಮ್ಮ ಪುಣ್ಯ! ಅಲ್ಲಿ ಯಾವುದೇ ಶೂ ಕಂಪೆನಿ ಇಲ್ಲ. ನಾವೇ ಮೊದಲು. ಭರ್ಜರಿ ಸೇಲು!!” ಎಂದ…

ಅದು ಅಂತಾರಾಶ್ಟ್ರೀಯ ಮಾರುಕಟ್ಟೆಯ ನೀತಿ. ಜನ ವಸ್ತುಗಳನ್ನು ಬೇಕಾಬಿಟ್ಟಿ ಕೊಳ್ಳುವಂತೆ ಮಾಡಬೇಕು. ಹಾಗಾದಾಗಲೇ ದೊಡ್ಡ ಕಂಪೆನಿಗಳ ಮಾಲೀಕರಿಗೆ ಸಮಾಧಾನ. ಈ ಕೊಳ್ಳುಬಾಕತನ ನಮ್ಮಲ್ಲಿ ಅದೆಷ್ಟು ಹೆಚ್ಚಾಗಿದೆಯೆಂದರೆ, ಮೊದಮೊದಲು ಪ್ರತಿಷ್ಠೆಯ, ಶ್ರೀಮಂತಿಕೆಯ ಸಂಕೇತವೆನಿಸಿದ್ದ ವಸ್ತುಗಳೂ ಈಗ ದೈನಂದಿನ ಅಗತ್ಯದ ವಸ್ತುಗಳೆನಿಸಿ, ಅದೇ ನೆವದಲ್ಲಿ ಸಾಲ ಮಾದಿಯಾದರೂ ತರಲೇಬೇಕೆನ್ನುವ ಅನಿವಾರ್ಯತೆ ಸೃಷ್ಟಿಸಿಕೊಂಡು, ಮನೆ ತುಂಬಿಬಿದ್ದಿವೆ. ಈಗ ವಾಲ್ ಮಾರ್ಟ್ ಭಾರತಕ್ಕೆ ಕಾಲಿಡುತ್ತಿರುವುದು, ಈ ಬೇಕುಗಳಿಗೆಲ್ಲ ಹೊಸ ಆಯಾಮ ನೀಡಲೆಂದೇ.

ವಾಲ್ ಮಾರ್ಟ್ ಗಳೆಂದರೆ, ನಮ್ಮ ಸೂಪರ್ ಮಾರ್ಕೆಟ್, ಬಿಗ್ ಬಜಾರ್ ಗಳಿಗಿಂತ ಐವತ್ತು ಪಟ್ಟು, ನೂರು ಪಟ್ಟು ದೊಡ್ಡದಾಗಿರುವ ಅಂಗಡಿಗಳು- ಶಾಪಿಂಗ್ ಮಾಲ್ ಗಳು.

ನಿಮಗೆ ನೆನಪಿರಬಹುದು. ಈ ಹಿಂದೆ ಮೆಟ್ರೋ ಬೆಂಗಳೂರಿಗೆ ಬಂದಾಗ ಸಾವಿರಾರು ಸಣ್ಣ ಸಣ್ಣ ವ್ಯಪಾರಿಗಳು ಮುಷ್ಕರ ಹೂಡಿದ್ದರು. ಅವತ್ತು ಸರ್ಕಾರದ ಸೆರಗು ಹಿಡಿದ ಮೆಟ್ರೋ, ನಾವು ಹೋಲ್ ಸೇಲ್ ಮಾರಾಟಗಾರರೆಂದು ಕಣ್ಣೊರೆಸಿತ್ತು. ಅನಂತರ ಇಲ್ಲಿ ತಳವೂರಿದ ಮೇಲೆ ರೀಟೇಲ್ ದಂಧೆಗಿಳಿದು, ಕೆಲ ಕಾಲ ಅಕ್ಕಪಕ್ಕದ ವ್ಯಾಪಾರಿಗಳು ನೀರು ಕುಡಿಯುವಂತೆ ಮಾಡಿತ್ತು.

ಎಲ್ಲಾ ಸರಿ. ಆದರೆ ಆಮೇಲಿನ ಮಜಾ ನೋಡಿ… ವಾಲ್ ಮಾರ್ಟ್ ಭಾರತಕ್ಕೆ ಬರುವ ಸುದ್ದಿ ಕೇಳಿ ಮೆಟ್ರೋ ಅದುರಿ ಬಿತ್ತು. ಬರಲು ಬಿಡಬೇಡಿ ಎಂದು ಸರಕಾರಕ್ಕೆ ಒತ್ತಡ ತಂದಿತು. ವಾಲ್ ಮಾರ್ಟ್ ಭಾರತಕ್ಕೆ ಬಂದರೆ ನಾವು ಸತ್ತೇ ಹೋಗಿಬಿಡುತ್ತೇವೆಂದು ಆತಂಕ ಅದಕ್ಕೆ! ಅಂದ ಮೇಲೆ ಅದರ ವ್ಯಾಪಾರ ಪರಿಧಿ ಅದೆಷ್ಟು ದೊಡ್ಡದು ಊಹಿಸಿಕೊಳ್ಳಿ.

“ಅಗ್ಗದ ಬೆಲೆಗೆ ವಸ್ತುಗಳ ಮಾರಾಟ, ಹೆಚ್ಚು ಪ್ರಮಾಣದಲ್ಲಿ ಮಾರಾಟ” ಇದು ವಾಲ್ ಮಾರ್ಟ್ ವ್ಯಾಪಾರ ನೀತಿ. ಸಾವಿರಾರು ಎಕರೆಗಳಲ್ಲಿ ಹರಡಿಕೊಂಡ ಮಳಿಗೆಗಳಲ್ಲಿ ಸಿಗದೇ ಇರುವುದು ಏನೂ ಇಲ್ಲ ಎಂಬುದು ಅದರ ಘೋಷಣೆ. ವಾಲ್ ಮಾರ್ಟ್ ನಲ್ಲಿ ’ಎಲ್ಲವೂ’ ಸಿಗುವ ಬಗ್ಗೆ ಹೀಗೊಂದು ಕಥೆಯಿದೆ. ವಾಲ್ ಮಾರ್ಟನ್ನು ಪರೀಕ್ಷಿಸಲೆಂದೇ ಅಮೆರಿಕದ ಅಧ್ಯಕ್ಷರೊಬ್ಬರು ಅಲ್ಲಿಗೆ ಭೇಟಿಯಿತ್ತಿದ್ದರಂತೆ. ಹಾಗೆ ವಾಲ್ ಮಾರ್ಟ್ ಪಡಸಾಲೆಯಲ್ಲಿ ನಿಂತ ಅವರು ಕೇಳಿದ್ದು ಒಂದು ಆನೆಯನ್ನು! ಕೂಡಲೇ ಒಳಗಿದ್ದ ಸೇಲ್ಸ್ ಮನ್ “ಸರ್, ಬಿಳಿ ಆನೆ ಕೊಡಲೋ, ಕರಿಯದ್ದೋ?” ಎಂಡು ಮಂದಸ್ಮಿತನಾಗಿ ಕೇಳಿದನಂತೆ. ಆಗ ಅಧ್ಯಕ್ಷರು ಕಕ್ಕಾಬಿಕ್ಕಿ!

ಇದು ವದಂತಿಯೇ ಇರಬಹುದಾದರೂ ಮಾರ್ಟ್ ನ ಕಾರ್ಯವೈಖರಿ ಹಾಗೆಯೇ ಇದೆ.

ಸಾಲುಗಟ್ಟುವ ಸಮಸ್ಯೆಗಳು…

ವಾಲ್ ಮಾರ್ಟ್ ಭಾರತಕ್ಕೆ ಬರುವುದರಿಂದ ಈಗಲೇ ಅರ್ಧ ಮಲಗಿರುವ ನಮ್ಮ ಸಣ್ಣ ವಹಿವಾಟುದಾರರು ಪೂರ್ತಿ ನಿತ್ರಾಣರಾಗಿ ಅಂಗಾತ ಮಲಗೋದು ಖಚಿತ. ನಮ್ಮಲ್ಲಿ 12 x 12 ರಷ್ಟಿರುವ ಅಂಗಡಿಗಳು ಒಂದು ಕೋಟಿಯಷ್ಟಾದರೂ ಇವೆ.  ದೊಡ್ಡ ದೊಡ್ಡ ಕಂಪೆನಿಗಳು ಮುಚ್ಚಿದಾಗ, ವಿ ಆರ್ ಎಸ್ ದೊರೆತಾಗ, ಎಕ್ಸಾಮ್ ಫೇಲ್ ಆದಾಗ, ಪೆನ್ಶನ್ ಹಣಾ ಬಂದಾಗಲೆಲ್ಲಾ ನಮ್ಮವರು ಒಂದು ಅಂಗಡಿ ತೆರೆದು ಕುಳಿತುಬಿಡುತ್ತಾರೆ.  ಅದು ಸಲೀಸು. ಸಣ್ಣ ಪ್ರಮಾಣದ ಆದಾಯವೂ ಗ್ಯಾರೆಂಟಿ.  ಆದರೆ ವಾಲ್ ಮಾರ್ಟ್ ಬಂದಮೇಲೆ ಅದೆಲ್ಲ ಬರೀ ಕನಸಾಗಿ ಉಳಿಯಲಿದೆ. ಬರಿ ಬನಶಂಕರಿಯ ಪುಟ್ಟ ಬಿಗ್ ಬಜಾರ್ ಅದೆಷ್ಟು ಚಿಕ್ಕ ಅಂಗಡಿಗಳನ್ನು ಕಮರಿ  ಹಾಕಿದೆ ಗೊತ್ತೇ!?

ಸಧ್ಯದ ಮಟ್ಟಿಗೆ ವಾಲ್ ಮಾರ್ಟ್ ವ್ಯಾಪಾರೀ ಜಗತ್ತಿನಲ್ಲಿ ದೈತ್ಯ. ಅಮೆರಿಕದಿಂದ ಹೊರಗೆ ಸುಮಾರು ೩ ಲಕ್ಷ ಕಾರ್ಮಿಕರು ಅದರಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಗತ್ತಿನೆಲ್ಲೆಡೆ ವಾಲ್ ಮಾರ್ಟ್ 120ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಪ್ರತಿ 42 ಗಂಟೆಗೊಂದು ಹೊಸ ಅಂಗಡಿ ತೆರೆಯುವ ಛಾತಿ ತನಗಿದೆ ಎಂದೂ ಅದು ಹೇಳಿಕೊಂಡಿದೆ.
ಈ ಕಂಪೆನಿಯ ಕಾರ್ಯಶೈಲಿ ತುಂಬ ಸರಳ. ಆಯಾ ದೇಶದ ಅತಿ ದೊಡ್ಡ ರೀಟೇಲರ್ ಗಳನ್ನು ಗುರುತಿಸಿ ಅವರನ್ನೇ ಖರೀದಿಸಿಬಿಡೋದು. ಆ ಮೂಲಕ ತಮ್ಮ ವಿರುದ್ಧ ಸೆಣೆಸಬಲ್ಲ ಒಬ್ಬ ದೊಡ್ಡ ವೈರಿಯನ್ನು ಒಂದೇ ಹೊಡೆತಕ್ಕೆ ಮಲಗಿಸಿದಂತೆ ಆಯಿತು! ಅವರನ್ನು ಬಳಸಿಕೊಂಡೇ ವಾಲ್ ಮಾರ್ಟ್ ತನ್ನ ಹೆಸರು ಜನರಿಗೆ ಒಗ್ಗುವಂತೆ ಮಾಡುತ್ತದೆ. ನಂತರ ಇದ್ದೇ ಇದೆ. ಇತರೆಡೆಗಿಂತ ಕಡಿಮೆ ದರದಲ್ಲಿ ವಸ್ತುಗಳನ್ನು ಮಾರುತ್ತೇವೆ ಎಂದು ಜಾಹೀರಾತುಗಳನ್ನು ತಗುಲಿಹಾಕೋದು. ನಮಗೆ ಅನಿವಾರ್ಯವಲ್ಲದ ವಸ್ತುಗಳೂ ಕಡಿಮೆ ಬೆಲೆಗೆ ದೊರೆಯುತ್ತವೆ ಎಂದರೆ ಯಾರು ಬೇಡವೆನ್ನುತ್ತಾರೆ ಹೇಳಿ? ಸರಿ. ಇದರ ಪರಿಣಾಮ, ವಾಲ್ ಮಾರ್ಟ್ ಗೆ ಭರ್ಜರಿ ವ್ಯಾಪಾರ. ಆ ಪ್ರದೇಶದ ಆಸುಪಾಸು 40 ಮೈಲುಗಳವರೆಗೂ ಚಿಕ್ಕ ಅಂಗಡಿಗಳಿಗೆ ವ್ಯಾಪಾರ ಖೋತಾ! ಅದನ್ನೇ ನೆಚ್ಚಿ ಬದುಕು ನಡೆಸುವ ಸಂಸಾರಗಳು ಬೀದಿಪಾಲು.

ನಮ್ಮದು ಬಿಡಿ. ಮುಂದುವರೆದ, ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸೇರುವ ಇಂಗ್ಲೆಂಡಿನಲ್ಲೂ ಹೀಗೇ ಆಗಿತ್ತು. ಪಟ್ಟಣದ ಹೊರವಲಯದಲ್ಲಿ ಒಂದು ವಾಲ್ ಮಾರ್ಟ್ ನ ದೊಡ್ಡ ಮಾಲ್ ಶುರುವಾಯ್ತು. ’ಟ್ರಾಫಿಕ್ ಕಿರಿಕಿರಿ ಬಿಡಿ, ಊರ ಹೊರಗೆ ಆರಾಮವಾಗಿ ಶಾಪಿಂಗ್  ಮಾಡಿ’ ಎಂಬ ಜಾಹೀರಾತಿಗೆ ಮರುಳಾದ ಜನ ಹಿಂಡುಹಿಂಡಾಗಿ ಲಗ್ಗೆ ಇಟ್ಟರು. ಅತ್ತ ಪಟ್ಟಣಾದೊಳಗಿನ ಅಂಗಡಿಗಳು ಖಾಲಿಖಾಲಿ. ಕೊನೆಗೆ ಕೈಲಾದವರು ಪೇಟೆಯೊಳಗಿನ ತಮ್ಮ ಅಂಗಡಿಗಳನ್ನು ಮುಚ್ಚಿ ತಾವೂ ಊರ ಹೊರಗೆ ಅಂಗಡಿಗಳನ್ನು ತೆರೆದು ಕುಳಿತರು! ತನಿಖೆ ನಡೆದು ವರದಿ ಸರ್ಕಾರದ ಮೇಜಿಗೆ ಹೋಯ್ತು. ಒಂದು ಸೂಪರ್ ಮಾರ್ಕೆಟ್ 276 ಜನ ಸ್ಥಳೀಯರ ಉದ್ಯೋಗ ಕಸಿಯುತ್ತೆ ಎಂಬ ಆಘಾತಕಾರಿ ಅಂಶ ಬಯಲಿಗೆ ಬಂತು. ಆದರೇನು? ಅಷ್ಟಾರಲ್ಲಾಗಲೇ ವಾಲ್ ಮಾರ್ಟ್ ಇಂಗ್ಲೆಂಡಿನ ಜನಜೀವನದ ಅಂಗವಾಗಿಬಿಟ್ಟಿತ್ತು.

ಮೆಕ್ಸಿಕೋದಲ್ಲಿ, ಅದರ ಶೇ 50ರಷ್ಟು ವ್ಯಾಪಾರ ವಾಲ್ ಮಾರ್ಟ್ ಹಿಡಿತದಲ್ಲಿದೆ. ಅಂದರೆ, ಆ ದೇಶದ ಅರ್ಧದಷ್ಟು ವ್ಯಾಪಾರಿಗಳು ಮಾರ್ಟ್ ನ ಅಡಿಯಾಳುಗಳು. ಆ ಮೂಲಕ ಇಡಿಯ ಸರ್ಕಾರವೇ ಅದಕ್ಕೆ ಅಧೀನ! 2004ರಲ್ಲಂತೂ ವಾಲ್ ಮಾರ್ಟ್, ಉತ್ಪಾದಕರು ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಬೇಕೆಂದು ತಾಕೀತು ಮಾಡಿದ್ದರಿಂದ ಬಡ ಉತ್ಪಾದಕರು ನೇಣಿಗೆರುವ ಪ್ರಸಂಗ ನಿರ್ಮಾಣವಾಗಿಹೋಗಿತ್ತು! ಇದೇ ರೀತಿಯ ಪರಿಸ್ಥಿತಿಯಿಂದಾಗಿ ಇಂಡೋನೇಷಿಯಾದ ಆರ್ಥಿಕತೆ ಗಂಭೀರ ಸ್ಥಿತಿ ತಲುಪಿ, ಸರ್ಕಾರವೇ ದಿವಾಳಿಯ ಅಂಚಿಗೆ ಬಂದು ನಿಂತಿತ್ತು!
ಇನ್ನು, ನೆರೆಯ ಚೀನಾಕ್ಕೆ ಮಾರ್ಟ್ ನುಗ್ಗಿದ್ದು 1996ರಲ್ಲಾದರೆ, ತನ್ನ ಮೊದಲ ದಾಳ ಎಸೆದಿದ್ದು 2003ರಲ್ಲಿ. ಅದಾದ ಎರಡೇ ವರ್ಶಗಳಾಲ್ಲಿ ಅದು ಬರೋಬ್ಬರಿ 22ಅಂಗಡಿಗಳನ್ನು ತೆರೆದು ಕುಳಿತಿತು. ಇಂದು ಅದು ತನ್ನ ಬೆರಳ ತುದಿಯಲ್ಲಿ ಆ ದೇಶವನ್ನು ಕುಣಿಸುತ್ತಿದೆ!

ಹೌದು. ವಾಲ್ ಮಾರ್ಟ್ ಭಾರತಕ್ಕೆ ಬರುವ ಪ್ರಕ್ರಿಯೆಗೆ ಚಾಲನೆ ದೊರಕಿ ವರ್ಷಗಳೇ ಕಳೆದಿವೆ. ಅದು ಆರಂಭಗೊಂಡ ದಿನಗಳಲ್ಲಿ ಒಂದಷ್ಟು ಸಂಘಟನೆಗಳು ಪ್ರತಿಭಟಿಸಿದ್ದೂ ನಿಜವೇ. ಆದರೆ ಈಗ ಅದನ್ನು ಮರೆಯುತ್ತ ಬಮ್ದು ಎಲ್ಲವೂ ತಣ್ಣಾಗಾಗುವ ಹೊತ್ತಿನಲ್ಲಿ ಸಮಯ ಸಾಧಿಸಿ, ಮೆಲ್ಲನೆ ಕಾಲಿಡಲಿದೆ ವಾಲ್ ಮಾರ್ಟ್. ಹಾಗೆ ಬರುವ ಮುನ್ನ ಸಾಕಷ್ಟು ಅಧ್ಯಯನ ನಡೆಸಿರುವ ಅದು ನಮ್ಮ ವೀಕ್ ನೆಸ್ಸುಗಳನ್ನು ಚೆನ್ನಾಗಿ ಅಭ್ಯಸಿಸಿಯೇ ಬರುತ್ತಿದೆ. ಅದಾ ಹೊರಗಿನವರಿಗೆ ಮಣೆ ಹಾಕುವ ನಮ್ಮ ಸರ್ಕಾರಗಳು ಅದಕ್ಕೆ ತಲೆಬಾಗಿ ಅದರ ಅಡಿಯಾಳಾಗುವ ದಿನವೇನೂ ದೂರವಿಲ್ಲ.

ಅಂದ ಹಾಗೆ… ಅವತ್ತೂ ಒಂದು ಈಸ್ಟ್ ಇಂಡಿಯಾ ಕಂಪೆನಿ ಬಂದಿತ್ತು, ವ್ಯಾಪಾರಕ್ಕೇಂತ. ಆಮೇಲೆ ಗೊತ್ತೇ ಆಗದ ಹಾಗೆ ನಾವು ನೂರಾರು ವರ್ಷ ಕಾಲ ಗುಲಾಮರಾಗಿಹೋದೆವು. ವಾಲ್ ಮಾರ್ಟ್ ಅದರದ್ದೇ ಸಂತಾನ. ವ್ಯಾಪಾರದ ನೆಪದಲ್ಲಿ ಅದು ನಮ್ಮನ್ನ ಕೊಳ್ಳುಬಾಕರನ್ನಾಗಿಸುತ್ತೆ. ನಾವೂ ಶಾಪಿಂಗಿಗೆ ಹೋಗೋದನ್ನ ಫ್ಯಾಶನ್ ಅಂದುಕೊಳ್ತೇವೆ. ಬೇಡದ್ದನ್ನು ಕೊಳ್ತೇವೆ. ಅದರ ಲಾಭ ಯಾರಿಗೋ ಸೇರಿಹೋಗತ್ತೆ! ಮತ್ತೆ ನಮ್ಮ ಜನರು ಬೀದಿ ಪಾಲಾಗುತ್ತಾರೆ. ನಾವು ಮೆಲ್ಲಗೆ ಮತ್ತೆ ದಾಸ್ಯದ ತೆಕ್ಕೆಗೆ ಸೇರಿಕೊಂಡುಬಿಡುತ್ತೇವೆ.

ಹಾಗಾದರೆ, ಇತಿಹಾಸ ನಮಗೇನೂ ಪಾಠ ಕಲಿಸಲೇ ಇಲ್ವೇ?

Posted in ದಿಲ್ ಹೈ ಹಿಂದೂಸ್ಥಾನಿ | 5 Comments »

ರಾಮಕೃಷ್ಣಾಶ್ರಮದಲ್ಲಿ ಪುಸ್ತಕ (ಪ್ರ)ದರ್ಶನ

Posted by Chakravarty on January 6, 2008

ಸ್ವಾಮಿ ವಿವೇಕಾನಂದ! ಅದು ಬರಿಯ ಹೆಸರಲ್ಲ. ಅದೊಂದು ಶಕ್ತಿ. ಅಸೀಮ ಸ್ಫೂರ್ತಿ. ಅವರನ್ನು ಆಲಿಸುತ್ತ, ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ… ಅದು ರಾಷ್ಟ್ರ ಪ್ರೇಮದ ಮಾತಾಗಿರಲಿ, ಸಮಾಜ ಸೇವಾ ಕ್ಷೇತ್ರವಿರಲಿ, ಅಥವಾ ಸಾಹಿತ್ಯ ಕ್ಷೇತ್ರವೇ ಆಗಿರಲಿ… ಎಲ್ಲೆಲ್ಲೂ ಹೊಸ ಹುಮ್ಮಸ್ಸಿನ ಅಲೆ ಎಬ್ಬಿಸುತ್ತ ಉತ್ಕೃಷ್ಟತೆಯ ಪತಾಕೆ ಹಾರಿಸುತ್ತ ಮೆರೆಯುವ ಏಕೈಕ ಹೆಸರು, ಸ್ವಾಮಿ ವಿವೇಕಾನಂದ.
ನಾವು ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ವಿವೇಕಾನಂದರ ಮಾತುಗಳು ಸಮರ್ಥ ಮಾರ್ಗದರ್ಶನ ನೀಡಬಲ್ಲವು. ಅವರಲ್ಲಿ ನಿರಾಶಾವಾದದ ಋಣಾತ್ಮಕ ಅಂಶವೇ ಇಲ್ಲ. ಎಂಥ ಪರಿಸ್ಥಿತಿಯಲ್ಲಿಯೂ ಸ್ವಾಮೀಜಿಯವರ ಮಾತು ಕೇಳಿದವನು ಚೈತನ್ಯದ ಚಿಲುಮೆಯಾಗಿಬಿಡುತ್ತಾನೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಸೋದರಿ ನಿವೇದಿತಾ, ನೇತಾಜಿ, ಅರವಿಂದರು, ಭಾಗಾ ಜತೀನ್, ಹೀಗೆ ಸಾಲು ಸಾಲು ಕ್ರಾಂತಿವೀರರು ವಿವೇಕಾನಂದರ ಪ್ರಖರ ತೇಜಸ್ಸಿನ ಸುಳಿಮಿಂಚಿಗೆ ಸಿಲುಕಿ ತಾವೂ ಧೃವತಾರೆಗಳಾದರು. ನಮ್ಮ ಕನ್ನಡದ ಕುವೆಂಪು ಅಂಥವರು ಸ್ವಾಮೀಜಿ ಚಿಂತನೆಗಳಿಂದ ಬಹಳ ಪ್ರಭಾವಿತರಾಗಿದ್ದರು. ಅವರ ಶಿಷ್ಯರಾದ ಜಿ. ಎಸ್. ಶಿವರುದ್ರಪ್ಪನವರೂ ಕೂಡ ವಿವೇಕಾನಂದರ ಮಾತುಗಳಿಂದ ಪ್ರಭಾವಿತರಾದವರೇ. ಇವರು ನಮ್ಮ ಕಣ್ಣಿಗೆ ಕಾಣುವ ಕನ್ನಡಿಗರಷ್ಟೇ. ಇನ್ನು ಇತರ ರಾಜ್ಯಗಳಲ್ಲಿ ಹೀಗೆ ಸ್ವಾಮೀಜಿ ವಿಚಾರ ಧಾರೆಗಳಿಂದ ಪ್ರಭಾವಿತರಾದ ಸಾಹಿತಿಗಳು ಅದೆಷ್ಟಿರುವರೋ?  
ಸಮಾಜ ಸೇವೆಯ ಕ್ಷೇತ್ರಕ್ಕೆ ಬಂದರೆ, ಸೋಲಿಗರ ನಡುವೆ ಕೆಲಸ ಮಾಡುವ, ಅವರಲ್ಲಿ ಬದುಕಿನ ವಿಶ್ವಾಸ ತುಂಬುತ್ತಿರುವ ಸುದರ್ಶನರು, ಹೆಗ್ಗಡೆದೇವನ ಕೋಟೆಯ ಬಾಲಸುಬ್ರಹ್ಮಣ್ಯರು, ಇವರೆಲ್ಲರ ಶಕ್ತಿಸ್ರೋತ ಸ್ವಾಮಿ ವಿವೇಕಾನಂದರೇ! ಇವರೂ ಕೂಡ ನಮ್ಮ ಸ್ಮರಣೆಗೆ ಥಟ್ಟನೆ ಬರುವ ವ್ಯಕ್ತಿಗಳು. ಇವರಂತೆ ಎಲೆ ಮರೆಯ ಕಾಯಿಗಳಾಗಿ ಸಮಾಜ ಸೇವೆಗೆ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಕಟಿ ಬದ್ಧರಾಗಿರುವವರು ಬಹಳ  ಷ್ಟಿದ್ದಾರೆ. ಇಂದಿನ ಯುವಶಕ್ತಿ ದಾರಿತಪ್ಪಿದೆ ಎಂದೆಲ್ಲ ಹೇಳು   ತ್ತೇವೆ, ಹೀಗೆ ಮಾರ್ಗಬಿಟ್ಟ ಯುವಕರನ್ನು ಮತ್ತೆ ಸರಿದಾರಿಗೆ ತರಲು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚುವುದು ಬಿಟ್ಟು ಬೇರೆ ಮಾರ್ಗವಿಲ್ಲ.
 ದೇಶಾದ್ಯಂತ ಇರುವ ರಾಮಕೃಷ್ಣಾಶ್ರಮಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಅವುಗಳಲ್ಲಿ ನಮ್ಮ ಬೆಂಗಳೂರಿನ ಆಶ್ರಮವೂ ಮುಖ್ಯವಾದುದು. “ಸುಮ್ಮನೆ ನೋಡಲೆಂದು” ಬಂದ ಅದೆಷ್ಟೋ ಯುವಕರು ಇಲ್ಲಿನ ಪ್ರಶಾಂತ ವಾತಾವರಣದ ಪ್ರಭಾವಲಯಕ್ಕೆ ಒಳಗಾಗಿ ಆಂತರಿಕ ಪರಿವರ್ತನೆ ಪಡೆದು ಹೊರನಡೆದಿದ್ದಿದೆ. ಆಶ್ರಮ ನಡೆಸುತ್ತಿರುವ ವಿದ್ಯಾರ್ಥಿಗಳ ಹಾಸ್ಟೆಲ್- ವಿದ್ಯಾರ್ಥಿ ಮಂದಿರವಂತೂ ಸಾವಿರ ಸಾವಿರ ಸಂಖ್ಯೆಯ ಯುವಕರಿಗೆ ಆದರ್ಶದ ಪಥ ರೂಪಿಸಿಕೊಟ್ಟಿದೆ, ಬದುಕಿಗೊಂದು ಧ್ಯೇಯ ಕಲ್ಪಿಸಿಕೊಟ್ಟಿದೆ. ಇದೆಲ್ಲ, ಆಶ್ರಮದ ಪೂಜಾವೇದಿಯಲ್ಲಿ ಅಪಾರ ಕರುಣೆ ಹರಿಸುತ್ತ, ತಣ್ಣಗೆ ನಗುತ್ತ ಕುಳಿತಿರುವ ಪರಮಹಂಸರ ಕರುಣೆ. ಬಂದ ಮಕ್ಕಳಿಗೆಲ್ಲ ಇಲ್ಲಿ ತಾಯಿ ಮಡಿಲಿನಲ್ಲಿರುವಂಥ ಸುರಕ್ಷತೆಯ ಭಾವ. ಜನನಿ ಶಾರದಾಮಾತೆ ಹರಸಿದ ಸ್ಥಳವಲ್ಲವೇ ಇದು? ಇಲ್ಲಿ ಈ ಬಗೆಯ ಹತ್ತು ಹಲವು ವೈಶಿಷ್ಟ್ಯಗಳು.
ಶತಮಾನದ ಇತಿಹಾಸ ಕಂಡ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸರಿಯುತ್ತಿರುವ ಕಾಲಕ್ಕೆ ಅಗತ್ಯವಿರುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತ, ಯುವ ಶಕ್ತಿ ಧನಾತ್ಮಕ ದಿಕ್ಕಿನಲ್ಲಿ ಹರಿಯುವಂತೆ ಮಾರ್ಗದರ್ಶನ ಮಾಡುತ್ತ, ಸ್ವಾಮೀಜಿಯವರ ಆಶಯವನ್ನು ಸಾಕಾರಗೊಳಿಸುತ್ತಿದೆ. ಭವ್ಯ ಭಾರತದ ನಿರ್ಮಾಣ ಕೇವಲ ಕನಸಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಇಂದಿನ ಪೀಳಿಗೆ ಬೌದ್ಧಿಕ ಚರ್ಚೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂಥದ್ದು.
ಬಸವನಗುಡಿಯಲ್ಲಿರುವ ರಾಮಕೃಷ್ಣಾಶ್ರಮ ಕಳೆದ ನೂರು ವರ್ಷದಿಂದ ಎಲ್ಲ ಬಗೆಯ ಜನರನ್ನು ಒಟ್ಟುಗೂಡಿಸುತ್ತ ಇಂಥದೊಂದು ಅವಕಾಶ ನೀಡುತ್ತ ಬಂದಿದೆ. ಮಾಡುತ್ತ ಬಂದಿದೆ. ರಾಮಕೃಷ್ಣ ಪರಮಹಂಸರು, ಶಾರದಾಮಾತೆಯರ ರೂಪದಲ್ಲಿ ಮುಮುಕ್ಷುಗಳಿಗೆ ಆಧ್ಯಾತ್ಮಿಕ ಸುಧೆ ಹರಿಸುತ್ತ, ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಬಲವಾಗಿ ನಿಂತಿದೆ. ಭಕ್ತ ಸಮ್ಮೇಳನಗಳು, ಯುವ ಸಮ್ಮೇಳನಗಳು ಈ ನಿಟ್ಟಿನಲ್ಲಿ ಸಾರ್ಥಕವಾದವುಗಳಂಥವು. ಪ್ರತಿ ವರ್ಷ ರಾಮಕೃಷ್ಣಾಶ್ರಮದಲ್ಲಿ ನಡೆಯುವ ರಾಮಕೃಷ್ಣ, ಶಾರದಾ ಮಾತೆ, ವಿವೇಕಾನಂದರ ಜಯಂತಿಯಂತೂ ಆಸ್ತಿಕರ, ಅಧ್ಯಯನಶೀಲರ ಗಮನ ಸೆಳೆಯುವಂಥವು. ಈ ಸಂಧರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನಗಳು, ಭಾವುಕರ ಮನಸೂರೆಗೊಂಡರೆ, ಆ ಸಂದರ್ಭದಲ್ಲಿನ ಪುಸ್ತಕಪ್ರದರ್ಶನ- ಮಾರಾಟ ವ್ಯವಸ್ಥೆ ಓದುಗರನ್ನ ಆಕರ್ಷಿಸುತ್ತದೆ. ಹೀಗೆ ಇಲ್ಲಿ ಹೃದಯಕ್ಕೂ ಆಹಾರ, ಬುದ್ಧಿಗೂ ಆಹಾರ. ರಾಮ ಕೃಷ್ಣರ, ಶ್ರೀಮಾತೆಯವರ, ವಿವೇಕಾನಂದರ ಮತ್ತು ರಾಮಕೃಷ್ಣ ಶಿಷ್ಯ ಪರಂಪರೆಯ ಅನೇಕಾನೇಕ ಸಂತರ ಜೀವನ ಚರಿತ್ರೆಗಳು, ಸ್ತೋತ್ರ ಮಾಲಿಕೆಗಳು, ಆಧ್ಯಾತ್ಮಿಕ ಜೀವನದಲ್ಲಿ ದಾರಿದೀವಿಗೆಗಳಾಗಬಲ್ಲ ಅದೆಷ್ಟೋ ಪುಸ್ತಕಗಳು ಈ ಪ್ರದರ್ಶನದಲ್ಲಿ ಸುಲಭ ಬೆಲೆಗೆ ದಕ್ಕುತ್ತವೆ.
ಅಂದಹಾಗೆ, ಜನವರಿ ೧ರಿಂದ ೧೫ರವರೆಗೆ ರಾಮಕೃಷ್ಣಾಶ್ರಮದಲ್ಲಿ ಪುಸ್ತಕ ಪ್ರದರ್ಶನವೇರ್ಪಡಿಸಲಾಗಿದೆ. ಈ ಸಂದರ್ಭವನ್ನು ಯಥೋಚಿತವಾಗಿಬಳಸಿಕೊಂಡು ಅದರ ಲಾಭ ಪಡೆಯಲು, ಆ ಮೂಲಕ ನಮ್ಮ ಅರಿವಿನ ಹಸಿವನ್ನು ನೀಗಿಕೊಳ್ಳಲು ಇದೊಂದು ಸುವರ್ಣಾವಕಾಶ.

Posted in ನಮ್ಮ ನಮ್ಮ ನಡುವೆ | No Comments »